ಬೆಳ್ತಂಗಡಿ; “ಮಾಮರ ಎಲ್ಲೋ ಕೋಗಿಲೆ ಎಲ್ಲೋ” ಎನ್ನುವ ನುಡಿಗಟ್ಟನ್ನು ಎಲ್ಲರೂ ಕೇಳಿರಬಹುದು. ಕೋಗಿಲೆ ತನಗೆ ಸಂಬಂಧವೇ ಇಲ್ಲದಂತೆ ಕಾಣುವ ಮಾವಿನ ಮರದ ಮೇಲೆ ಕುಳಿತು ಹಾಡುತ್ತದೆ. ನೋಡುವವರಿಗೆ ಅವೆರಡರ ನಡುವೆ ಅವಿನಾಭಾವ ಸಂಬಂಧ ಇರುವಂತೆ ಕಾಣುತ್ತದೆ.
ಬೆಳ್ತಂಗಡಿ ರೋಟರಿ ಸಂಸ್ಥೆ ಒಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆ. ಆದರೆ ಅದರ ಸದಸ್ಯರಲ್ಲಿ ಅನೇಕ ಉತ್ತಮ ವಾಗ್ಮಿಗಳು, ಲೇಖಕರು, ಸಾಹಿತಿಗಳು ಇದ್ದಾರೆ. ಪ್ರಸಕ್ತ ಸಾಲಿನ ಅಧ್ಯಕ್ಷ ರೋ. ಡಾ ಪ್ರಕಾಶ ಪ್ರಭು ಹಾಗೂ ಕಾರ್ಯದರ್ಶಿ ಡಾ ಎಂ ಎಂ ದಯಾಕರರು, ಹಾಗೂ ಸದಸ್ಯ ರೋ. ಸೋಮಶೇಖರ ಶೆಟ್ಟಿಯವರು ಉತ್ತಮ ಲೇಖಕರು ಮತ್ತು ಸಾಹಿತಿಗಳು.
ಡಾ ಪ್ರದೀಪ ಕುಮಾರ್, ಎಂಎಲ್ಸಿ ಯೂ ಆಗಿರುವ ಪ್ರತಾಪ ಸಿಂಹ ನಾಯಕ್, ಬಿ.ಕೆ ಧನಂಜಯ್ ರಾವ್ ಮುಂತಾದ ಅನೇಕ ಸದಸ್ಯರು ಉತ್ತಮ ವಾಗ್ಮಿಗಳು. ಹಾಗಾಗಿ ಸಹಜವಾಗಿಯೇ ಬೆಳ್ತಂಗಡಿ ರೋಟರಿ ಸಂಸ್ಥೆ ಸಾಹಿತ್ಯದೆಡೆಗೂ ಆಸಕ್ತಿ ಹೊಂದಿದೆ.
ಈ ವರೆಗೆ 3 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 450ಕ್ಕೂ ಮಿಕ್ಕಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡಿರುವ ಈ ಸಂಸ್ಥೆ, ಈ ವರ್ಷದ ಕೊನೆಯ ಸೇವಾ ಕಾರ್ಯಕ್ರಮವಾಗಿ ಬೆಳ್ತಂಗಡಿಯ ರೋಟರೀ ಕ್ಲಬ್ಬಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾಹಿತ್ಯಿಕ ಸಂಭ್ರಮವೊಂದನ್ನು ಆಯೋಜಿಸುತ್ತಿದೆ.
ಮೇ17, ಭಾನುವಾರ ಉಜಿರೆಯ ಅರಳೀ ರಸ್ತೆಯಲ್ಲಿರುವ ರೋಟರೀ ಸೇವಾ ಭವನದಲ್ಲಿ “ಕನ್ನಡ ಸಾಹಿತ್ಯ ಸಂಭ್ರಮ ಮತ್ತು ಬಹುಭಾಷಾ ಕವಿ ಗೋಷ್ಠಿ” ಎಂಬುದಾಗಿ ಒಂದು ಸಮ್ಮೇಳನವನ್ನೇ ಆಯೋಜಿಸಿಕೊಂಡಿದೆ.
ಶರತ್ ಕೃಷ್ಣ ಪಡ್ವೆಟ್ನಾಯರ ಗೌರವಾಧ್ಯಕ್ಷತೆಯಲ್ಲಿ, ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ ಎಂ ಎಂ ದಯಾಕರ ರವರ ನೇತೃತ್ವದಲ್ಲಿ ನಡೆಯುವ ಈ ಸಮ್ಮೇಳನಕ್ಕೆ ಸಾಹಿತ್ಯಾಭಿಮಾನಿಗಳನ್ನು ಮುಕ್ತವಾಗಿ ಬರಮಾಡಿಕೊಳ್ಳಲಾಗಿದೆ.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯದುಪತಿ ಗೌಡರು ಸಮ್ಮೇಳನಾಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರರು ಉದ್ಘಾಟಕರಾಗಿ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ , ಊರಿನ ಗಣ್ಯ ವ್ಯಕ್ತಿಗಳಾದ ಸಂಧ್ಯಾ ಗ್ರೂಪ್ಸ ನ ಮಾಲಕ ರಾಜೇಶ ಪೈ, ಎಕ್ಸೆಲ್ ಸಂಸ್ಥೆಯ ಅಧ್ಯಕ್ಷ ಸುಮಂತ ಕುಮಾರ್ ಜೈನ್, ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ ಭಿಡೆ, ಶ್ರದ್ಧಾ ಪ್ರಿಂಟರ್ಸ್ನ ವಸಂತ ಶೆಟ್ಟಿ ಇವರೆಲ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳಗ್ಗೆ 9:30 ಕ್ಕೆ “ಎಕ್ಸೆಲ್” ವೇದಿಕೆಯಲ್ಲಿ ಉದ್ಘಾಟನೆ ಮತ್ತು ಪ್ರಬುದ್ಧ ಗೋಷ್ಠಿಗಳು, ಮಧ್ಯಾಹ್ನ 1:45 ಕ್ಕೆ ಹಿರಿಯ ಸಾಹಿತಿ ದಿವಂಗತ “ಎನ್ ಜಿ ಪಟವರ್ಧನ್ ಕಲಾ ವೇದಿಕೆ”ಯಲ್ಲಿ ಬಹುಭಾಷಾ ಕವಿ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಬೆಳಗ್ಗೆ ಉದ್ಛಾಟನಾ ಕಾರ್ಯಕ್ರಮದ ಬಳಿಕ ಡಾ. ಹಳೆಮನೆ ರಾಜ ಶೇಖರ್ ರವರಿಂದ “ಹೊಸ ತಲೆ ಮಾರು ಮತ್ತು ಓದಿನ ಅಭಿರುಚಿ”, ಡಾ ದಿವಾ ಕೊಕ್ಕಡ ಅವರಿಂದ “ಮನುಜ ಮತ ವಿಶ್ವ ಪಥ”, ಡಾ ರವೀಶ ಪಡಿಮಲೆ ಯವರಿಂದ “ತುಳುನಾಡಿನ ದೈವಾರಾಧನೆ”ಪ್ಪಬುದ್ಧ ಗೋಷ್ಠಿಗಳು ಹಾಗೂ ಡಾ ಪ್ರದೀಪ ಆಟುಕುಕ್ಕೆ ಅವರಿಂದ ಸಂವಹನ ಕಾರ್ಯಕ್ರಮ ನಡೆಯಲಿವೆ. ಮಧ್ಯಾಹ್ನ ಬಹುಭಾಷ ಕವಿಗೋಷ್ಠಿ ನಡೆಯಲಿದೆ.
ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಿರಂತರ ಊಟ ತಿಂಡಿ , ತಂಪು ಪಾನೀಯದ ಉಪಚಾರ ಇರುತ್ತದೆ.
ಗ್ರೂಪ್ ಫೋಟೋ ಸ್ಪರ್ಧೆ; ನಗದು ಬಹುಮಾನ:
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿಶೇಷ ಗ್ರೂಪ್ ಫೋಟೋ ಸ್ಪರ್ಧೆ ಇರುತ್ತದೆ. ಕನಿಷ್ಠ 7 ಜನರು, ಆಕರ್ಷಕ ಸಮವಸ್ತ್ರಧಾರಿಗಳಾಗಿ, ಇಡೀ ದಿನದ ಕಾರ್ಯಕ್ರಮವನ್ನು ಒಟ್ಟಿಗೆ ಕುಳಿತು ವೀಕ್ಷಣೆ ಮಾಡಿ, ಛಾಯಾಚಿತ್ರ ತೆಗೆದು ಅಥವ ರೀಲ್ಸ್ ಮಾಡಿ ಅಧ್ಯಕ್ಷರ ವಾಟ್ಸಪ್ ಗೆ ಕಳುಹಿಸಬೇಕು. ಪ್ರಥಮ ತಂಡಕ್ಕೆ ರೂ 2,000/-, ದ್ವಿತಿಯ ತಂಡಕ್ಕೆ 1,000/-, ತೃತೀಯ ತಂಡಕ್ಕೆ ರೂ 500 ಬಹುಮಾನ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷರ ವಾಟ್ಸಪ್ ಸಂಖ್ಯೆ 9448060206 ಕ್ಕೆ ಕರೆ ಮಾಡಿ ವಿಚಾರಿಸಬಹುದು.





