ಬೆಳ್ತಂಗಡಿ : ರಾಜ್ಯದ ಶೈಕ್ಷಣಿಕ ವಾತಾವರಣದಲ್ಲಿ ಸಮಾನತೆ ಕಾಪಾಡುವುದು ಹಾಗೂ ಮುಂಬರುವ ಹಬ್ಬದ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯು ತಹಶೀಲ್ದಾರ್ ರವರ ಮುಖೆನ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಿಗೆ ಹಾಗೂ ಗೃಹ ಸಚಿವರಿಗೆ ಪ್ರತ್ಯೇಕ ಮನವಿ ಪತ್ರಗಳನ್ನು ಸಲ್ಲಿಸಿ ತಕ್ಷಣದ ಕ್ರಮಕ್ಕೆ ಆಗ್ರಹಿಸಿದೆ.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿ, ಕೇಸರಿ ಶಾಲು ಧರಿಸುವುದನ್ನು ನಿರ್ಬಂಧಿಸಿರುವ ಸರ್ಕಾರದ ಇತ್ತೀಚಿನ ನಿರ್ಧಾರವು ಸಮಾನತೆ, ಧರ್ಮನಿರಪೇಕ್ಷತೆ ಹಾಗೂ ಏಕರೂಪದ ಸಮವಸ್ತ್ರ ನೀತಿಗೆ ವಿರುದ್ಧವಾಗಿದೆ ಎಂದು ಸಮಿತಿಯು ಮಾನ್ಯ ಶಿಕ್ಷಣ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದೆ. ಈ ಧಾರ್ಮಿಕ ಗುರುತುಗಳಿಗೆ ಪ್ರತ್ಯೇಕ ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಧರ್ಮ ಆಧಾರಿತ ವಿಭಜನೆ ಮತ್ತು ಗುಂಪುಗಾರಿಕೆ ಹೆಚ್ಚಾಗಲಿದ್ದು, ಶೈಕ್ಷಣಿಕ ಸಂಸ್ಥೆಗಳು ಧಾರ್ಮಿಕ ಸಂಘರ್ಷಗಳ ವೇದಿಕೆಯಾಗುವ ಅಪಾಯವಿದೆ ಎಂದು ಸಮಿತಿ ಎಚ್ಚರಿಸಿದೆ. ಕಳೆದ 2022 ರ ಹಿಜಾಬ್ ವಿವಾದದ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಲ್ಲ ಎಂದು ಸ್ಪಷ್ಟಪಡಿಸಿ, ನಿಗದಿತ ಸಮವಸ್ತ್ರ ಪಾಲನೆಗೆ ಮಹತ್ವದ ತೀರ್ಪು ನೀಡಿತ್ತು. ಪ್ರಸ್ತುತ ಈ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವಾಗ ಸರ್ಕಾರದ ಈ ನಿರ್ಧಾರ ನ್ಯಾಯಾಂಗ ಪ್ರಕ್ರಿಯೆಗೆ ವಿರುದ್ಧವಾಗಿದ್ದು, ಹಿಜಾಬ್ಗೆ ಅವಕಾಶ ನೀಡುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಸಮಿತಿ ಒತ್ತಾಯಿಸಿದೆ.

ಇದರೊಂದಿಗೆ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಪ್ರತ್ಯೇಕ ಧಾರ್ಮಿಕ ಚಿಹ್ನೆ, ಶಾಲು ಅಥವಾ ಉಡುಪುಗಳಿಗೆ ಆಸ್ಪದ ನೀಡದೆ ಏಕರೂಪದ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಶಾಲಾ ಆವರಣದಲ್ಲಿ ಶಿಸ್ತು ಹಾಗೂ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಗೆ ಆಗ್ರಹಿಸಲಾಗಿದೆ.
ಮತ್ತೊಂದೆಡೆ, ಮುಂಬರುವ ಮೇ 28, 2026 ರಂದು ನಡೆಯಲಿರುವ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಬಾಹಿರ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟವನ್ನು ಸಂಪೂರ್ಣವಾಗಿ ತಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಮಿತಿಯು ಮಾನ್ಯ ಗೃಹ ಸಚಿವರಿಗೆ ಮನವಿ ಮಾಡಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ರಸ್ತೆ ಬದಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಾನೂನು ಉಲ್ಲಂಘಿಸಿ ಗೋಹತ್ಯೆ ನಡೆಯುತ್ತಿರುವುದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಆದ್ದರಿಂದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪ್ರಮುಖ ಪ್ರವೇಶ ದ್ವಾರಗಳಲ್ಲಿ 24 ಗಂಟೆಗಳ ವಿಶೇಷ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಬೇಕು, ಅಕ್ರಮ ಪಶು ಸಾಗಾಟ ಹಾಗೂ ಗೋಹತ್ಯೆಯಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು ಮತ್ತು ಸಾಮಾಜಿಕ ಸೌಹಾರ್ದತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಗೃಹ ಇಲಾಖೆಯನ್ನು ಒತ್ತಾಯಿಸಲಾಗಿದೆ.
ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ, ನಾಗರಿಕರ ಧಾರ್ಮಿಕ ಭಾವನೆಗಳ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸರ್ಕಾರವು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಿದ ಈ ಮನವಿ ಸಂದರ್ಭದಲ್ಲಿ ಧರ್ಮಪ್ರೇಮಿಗಳಾದ ಶ್ರೀ ಕೇಶವ ಅಚ್ಚಿನಡ್ಕ,ಶ್ರೀ ರಾಜೇಂದ್ರ ಜಿ. ಕಾನರ್ಪ, ಶ್ರೀ ಜಗದೀಶ್ ಚಂದ್ರ ವೇಣೂರು, ಶ್ರೀ ಪ್ರಸನ್ನ ಬೇಕಲ್ ಬೆಳ್ತಂಗಡಿ,, ಶ್ರೀ ವಿಘ್ನೇಶ್ ಆಚಾರ್ಯ, ಶ್ರೀಮತಿ ಕಸ್ತೂರಿ ಬೆಳ್ತಂಗಡಿ, ಶ್ರೀ ಶಿವರಾಮ್ ಎಂ ಕೆ ಉಜಿರೆ, ಸೌ ಶಾರದ ಭಂಡಾರ್ಕರ್, ಶ್ರೀ ಯೋಗೀಶ್ ಅಚ್ಚಿನಡ್ಕ, ಶ್ರೀ ಹರೀಶ್ ಮುದ್ದಿನಡ್ಕ ಮುಂತಾದವರು ಉಪಸ್ಥಿತರಿದ್ದರು.







