ಕಡಬ: ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಮೇ 25ರಂದು ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋಟ್ರಾವೆಲ್ಲರ್ ಹಾಗೂ ಧರ್ಮಸ್ಥಳ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ (ಕೆ.ಎ.43 ಎ.6435)ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಇತ್ತ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ನ್ನು ಶೇಟ್ ಮಲ್ಲಿಕಾ ಮದ್ರಾಸ್ ಅವರು ಚಲಾಯಿಸುತ್ತಿದ್ದರು. ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಎರಡೂ ವಾಹನಗಳು ಡಿಕ್ಕಿಯಾಗಿವೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮವಾಗಿ ಟೆಂಪೋ ಟ್ರಾವೆಲ್ಸ್ ನಲ್ಲಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಆಂಜನಮ್ಮ (47) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಐದು ವರ್ಷದ ನಯಾನಿಕಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ನರಸಿಂಹಯ್ಯ, ವಿ. ಮಂಜುನಾಥ, ವಿ. ಗಂಗಾಧರ, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಅವರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಅಪಾಯದಿಂದ ಪಾರಾಗಿದ್ದಾರೆ.

ದೇವನಹಳ್ಳಿಯಿಂದ ಹೊರಟಿದ್ದ ಯಾತ್ರಾರ್ಥಿಗಳ ತಂಡ ಹೊರನಾಡು, ಶೃಂಗೇರಿಗೆ ಹೋಗಿ ಧರ್ಮಸ್ಥಳಕ್ಕೆ ಬಂದು ಅಲ್ಲಿ ತಂಗಿ, ಮೇ 25ರಂದು ಬೆಳಗ್ಗೆ ಸೌತಡ್ಕ, ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಬಂದು ಪೂಜೆ ಸಲ್ಲಿಸಿ ಊರಿನತ್ತ ತೆರಳುತ್ತಿದ್ದರು.
ಮೃತದೇಹವನ್ನು ಕಡಬ ಕೇಂದ್ರದಲ್ಲಿ ಇರಿಸಲಾಗಿದ್ದು, ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.







