ಮಂಗಳೂರು: ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಳೆದ ಕೆಲವು ತಿಂಗಳುಗಳಿಂದ ಕೋಮಾದಲ್ಲಿದ್ದ ಕಿನ್ನಿಗೋಳಿಯ ಯುವತಿ ರವಿವಾರ(ಮೇ 24) ನಿಧನರಾಗಿದ್ದಾರೆ.

ಮೃತರನ್ನು ಪುನರೂರಿನ ವಾಸುದೇವ ಅಗ್ರಹಾರ ನಿವಾಸಿ, ಶ್ರೀಲತಾ ತಂತ್ರಿ(22) ಎಂದು ಗುರುತಿಸಲಾಗಿದೆ. ಕಟೀಲು ಹಾಗೂ ಮೂಡುಬಿದ್ರೆಯ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಶ್ರೀಲತಾ, ಉದ್ಯೋಗ ನಿಮಿತ್ತ 2025ರ ಜುಲೈನಲ್ಲಿ ದುಬೈಗೆ ತೆರಳಿದ್ದರು.
ನವೆಂಬರ್ನಲ್ಲಿ ನಡೆದ ವಾಹನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಕಂಪನಿಯವರು ಚಿಕಿತ್ಸಾ ವೆಚ್ಚವನ್ನು ಭರಿಸಿಕೊಂಡಿದ್ದು, ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆ ಮೂರು ದಿನಗಳ ಹಿಂದೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಲತಾ ಮೇ 24ರಂದು ಕೊನೆಯುಸಿರೆಳೆದರು. ಅವರು ತಾಯಿ ಹಾಗೂ ಅಕ್ಕನನ್ನು ಅಗಲಿದ್ದಾರೆ. ಪ್ರತಿಭಾನ್ವಿತ ಕಲಾವಿದೆಯಾಗಿದ್ದ ಶ್ರೀಲತಾ, ಶಾಲಾ-ಕಾಲೇಜು ದಿನಗಳಲ್ಲಿ ನೃತ್ಯಗಾರ್ತಿಯಾಗಿ, ರಾಜ್ಯಮಟ್ಟದ ಕ್ರೀಡಾಪಟುವಾಗಿ ಹಾಗೂ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿದ್ದರು.




