ಬಂಟ್ವಾಳ: ತಾಲೂಕಿನ ಬಿ. ಮೂಡ ಗ್ರಾಮದ ಕಂಚಿಕಾರ ಪೇಟೆ ಸಮೀಪದ ನದಿ ಬದಿಯಲ್ಲಿ ಬುಧವಾರ ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ನೀರಿನಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಬುಧವಾರ ಮುಂಜಾನೆ ನದಿ ಬದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಕಸಬಾ ನಿವಾಸಿ ಸಾಕೀರ್ (37) ಎಂಬುವರಿಗೆ ಅವರ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಾಕೀರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸುಮಾರು 50 ರಿಂದ 55 ವರ್ಷ ಪ್ರಾಯದಂತೆ ಕಾಣುವ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಕುರಿತು ತಕ್ಷಣವೇ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ನದಿಯಿಂದ ಹೊರಗೆತ್ತಿದ್ದಾರೆ.
ಪ್ರಾರಂಭದಲ್ಲಿ ಪೊಲೀಸರು ಇದನ್ನು ಅಸಹಜ ಸಾವು ಎಂದು ಪರಿಗಣಿಸಿ, ಯು.ಡಿ.ಆರ್ ನಂ. 16/2026 ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.
ಪೊಲೀಸರು ತೀವ್ರ ಹುಡುಕಾಟ ಹಾಗೂ ತನಿಖೆ ನಡೆಸಿದಾಗ, ಮೃತ ವ್ಯಕ್ತಿ ಬಂಟ್ವಾಳದ ಗೂಡಿನಬಳಿ ನಿವಾಸಿ ಇರ್ಫಾನ್ (39) ಎಂಬುದು ಬೆಳಕಿಗೆ ಬಂದಿದೆ. ಮೃತರ ತಂದೆಯವರು ಪೊಲೀಸ್ ಠಾಣೆಗೆ ಬಂದು ಮೃತದೇಹವನ್ನು ತಮ್ಮ ಮಗನದ್ದೇ ಎಂದು ಗುರುತಿಸಿದ್ದಾರೆ.
ಸಾವಿನ ಸುತ್ತ ಅನುಮಾನದ ಹುತ್ತ!
“ಇರ್ಫಾನ್ ಸಾವು ಸಾಮಾನ್ಯ ಸಾವಲ್ಲ, ಇದರ ಹಿಂದೆ ಬೇರೇನೋ ರಹಸ್ಯವಿದೆ” ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಇರ್ಫಾನ್ ಅವರ ನಿಗೂಢ ಸಾವಿನ ಬಗ್ಗೆ ಕುಟುಂಬ ಸದಸ್ಯರು ತೀವ್ರ ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮೃತದೇಹವನ್ನು ಸುದೀರ್ಘ ವೈದ್ಯಕೀಯ ಪರೀಕ್ಷೆಗೆ (Post-Mortem) ಒಳಪಡಿಸಲಾಗಿದ್ದು, ಸದ್ಯ ವರದಿಗಾಗಿ ಕಾಯಲಾಗುತ್ತಿದೆ.
ವೈದ್ಯಕೀಯ ವರದಿ ಕೈ ಸೇರಿದ ತಕ್ಷಣ, ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ. ವರದಿಯ ಆಧಾರದ ಮೇಲೆ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.







