ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಕಜೆಯಲ್ಲಿ ಭೀಕರ ಹಾಗೂ ಮನಕಲಕುವ ಘಟನೆಯೊಂದು ಜೂನ್ 20ರ ಶನಿವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ. ಪತ್ನಿಯನ್ನು ಕೊಲೆ ಮಾಡಿ, ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ದಕಟ್ಟೆ ಮೂಲದ ಸಂಗೀತ ಮೃತಪಟ್ಟ ದುರ್ದೈವಿ ದಂಪತಿ. ಇವರು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.


ಬಾಡಿಗೆ ಮನೆಯಲ್ಲಿ ದುರಂತ:
ಇತ್ತೀಚೆಗಷ್ಟೇ ಅಂದರೆ ಜೂನ್ 19ರ ಸಂಜೆ ಈ ದಂಪತಿ ಆಲಂಕಾರು ಕಜೆಯ ಬಾಡಿಗೆ ಮನೆಗೆ ಪುನಃ ಬಂದಿದ್ದರು. ಆದರೆ ಮರುದಿನವೇ (ಜೂನ್ 20) ಇಬ್ಬರೂ ಮೃತದೇಹವಾಗಿ ಪತ್ತೆಯಾಗಿದ್ದಾರೆ.
ಒಳಗಿನಿಂದ ಹಾಕಿದ್ದ ಚಿಲಕ:
ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು. ಪತ್ನಿಯನ್ನು ಉಸಿರುಗಟ್ಟಿಸಿಯೋ ಅಥವಾ ಬೇರೆ ರೀತಿಯಲ್ಲೋ ಕೊಲೆ ಮಾಡಿ, ಬಳಿಕ ಪತಿ ದಿನೇಶ್ ನೇಣಿಗೆ ಶರಣಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಮನಕಲಕುವ ದೃಶ್ಯ:
ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿತ್ತು. ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದನ್ನು ಅರಿಯದ ಮಗು, ಮನೆಯೊಳಗೆ ಅತ್ತು ಅತ್ತು ಸುಸ್ತಾಗಿ ಮತ್ತೆ ಹೆತ್ತವರ ಶವದ ಬಳಿಯೇ ನಿದ್ದೆಗೆ ಜಾರಿತ್ತು ಎಂದು ಸ್ಥಳೀಯರು ಕಣ್ಣೀರು ತುಂಬಿ ಹೇಳಿದ್ದಾರೆ.
ಸ್ಥಳೀಯರ ಹೇಳಿಕೆ:
“ದಂಪತಿ ಒಂದು ತಿಂಗಳ ಹಿಂದೆಯಷ್ಟೇ ಆಲಂಕಾರು ಪೇಟೆಯ ಹೋಟೆಲ್ ವ್ಯವಹಾರ ಬಿಟ್ಟು ತೆರಳಿದ್ದರು. ಆದರೆ ಜೂನ್ 19ರಂದು ವಾಪಸ್ ಬಂದಿದ್ದರು. ಮರುದಿನವೇ ಈ ದಾರುಣ ಘಟನೆ ನಡೆದಿದೆ. ಮಗು ಅಳುತ್ತಿದ್ದ ಧ್ವನಿ ಕೇಳಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.”
ಸ್ಥಳಕ್ಕೆ ಪೊಲೀಸರ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸ್ ಉಪನಿರೀಕ್ಷಕರಾದ ಜಂಬುರಾಜ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾಗಿದ್ದು, ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





