ಕಟಪಾಡಿ: ಕಟಪಾಡಿಯ ಎಸ್.ವಿ.ಕೆ./ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕರು ಹಾಗೂ ಯೋಗ ಶಿಕ್ಷಕರಾದ ಶ್ರೀ ಭಾಸ್ಕರ್ ಕಾಮತ್ ಅವರು ಯೋಗದ ಮಹತ್ವದ ಕುರಿತು ಮಾತನಾಡಿ, ಯೋಗದ ಮೂಲ ಉದ್ದೇಶ ಶಾರೀರಿಕ ದೃಢತೆಯ ಜೊತೆಗೆ ಮಾನಸಿಕವಾಗಿ ಸದೃಢರಾಗಿರುವುದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ. ಚಂದ್ರಕಾಂತ್ ಪೈ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವರು ಪ್ರತಿಯೊಬ್ಬ ವಿದ್ಯಾರ್ಥಿಯೂ ನಿತ್ಯ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಏಕಾಗ್ರತೆ ಹೆಚ್ಚುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿ ಬೆಳೆಯಬೇಕು ಎಂದು ಕರೆ ನೀಡಿದರು.
ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳ ಪ್ರತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿಗಳು ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿದ್ಯಾರ್ಥಿಗಳು ಉತ್ಸಾಹ ಹಾಗೂ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾ ಡಿ’ಸೋಜಾ, ಶೈಕ್ಷಣಿಕ ಸಲಹೆಗಾರ ಶ್ರೀ ದೇವೇಂದ್ರ ನಾಯಕ್, ಆಡಳಿತ ಮಂಡಳಿ ಸದಸ್ಯ ಶ್ರೀ ಶ್ರೀನಿವಾಸ್ ಕಿಣಿ ಹಾಗೂ ಆಡಳಿತಾಧಿಕಾರಿ ಶ್ರೀ ಸುಧಾಕರ್, ಬ್ರಹ್ಮಾವರ್, ಶಾಲಾ ನಾಯಕ ಪದ್ಮನಾಭ ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಶಮ್ಯ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಭಾಷಣವನ್ನು ವಿದ್ಯಾರ್ಥಿನಿ ನುಶ್ರಾ ಫಾತಿಮಾ ನೆರವೇರಿಸಿದರೆ, ವಂದನಾರ್ಪಣೆಯನ್ನು ವಿದ್ಯಾರ್ಥಿನಿ ಸಾದಿಯಾ ಸಲ್ಲಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾದ ಶ್ರೀ ಭಾಸ್ಕರ್ ಕಾಮತ್ ಅವರಿಗೆ ಫಲ-ಪುಷ್ಪ ನೀಡಿ ಗೌರವಿಸಲಾಯಿತು.





