ಮಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಸ್ನಾನಕ್ಕೆಂದು ಬಾತ್ ರೂಂಗೆ ತೆರಳಿ ಆತ್ಮಹತ್ಯೆಗೆ ಶರಣಾಗಿರುವ ಧೃತಿಗೆಡಿಸುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ಬಸ್ ತಂಗುದಾಣದ ಬಳಿ ನಡೆದಿದೆ.


ಸೋಮೇಶ್ವರ ಬಸ್ ತಂಗುದಾಣದ ಸಮೀಪದ ನಿವಾಸಿಯಾದ ಶಾಂತಿ ಎಂಬವರ ಪುತ್ರಿ ಸಮನ್ವಿ (16) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ವಿದ್ಯಾರ್ಥಿನಿ ಸೋಮೇಶ್ವರದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ವಿಜ್ಞಾನ (Science) ವಿಭಾಗದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಭಾನುವಾರ ಸಂಜೆ ಮನೆಯಲ್ಲಿ ತಾಯಿ ಮತ್ತು ಹಿರಿಯ ಸಹೋದರಿ ಇದ್ದ ಸಂದರ್ಭದಲ್ಲಿ ಸಮನ್ವಿ ಸ್ನಾನ ಮಾಡಲೆಂದು ಬಾತ್ ರೂಂಗೆ ತೆರಳಿದ್ದಾಳೆ. ಆದರೆ ಎಷ್ಟು ಹೊತ್ತಾದರೂ ಆಕೆ ಹೊರಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಬಾಗಿಲು ಬಡಿದಿದ್ದಾರೆ. ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಸಮನ್ವಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉಳ್ಳಾಲ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಯುಡಿಆರ್ (UDR – ಅಪಸ್ವರೂಪದ ಸಾವು) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿನಿಯ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.





