ಸುಳ್ಯ: ಕೆಲವು ವರ್ಷಗಳ ಹಿಂದೆ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಹೋಗಿದ್ದ ಯಾತ್ರಿಕರ ಮೃತದೇಹವನ್ನು ಭಾರಿ ಮಳೆಯ ನಡುವೆಯೂ ಹರಸಾಹಸ ಪಟ್ಟು ಮೇಲಕ್ಕೆತ್ತಿ ತಂದು ರಾಜ್ಯ ಸರಕಾರದ ಗಮನ ಸೆಳೆದು ಮುಖ್ಯಮಂತ್ರಿ ಪದಕ್ಕ ಪಡೆದಿರುವ ಅಗ್ನಿಶಾಮಕ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ಇದೀಗ ಮತ್ತೊಂದು ಸಾಹಸ ಕಾರ್ಯದ ಮೂಲಕ ವ್ಯಕ್ತಿಯ ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.





ಸುಳ್ಯ ತಾಲೂಕಿನ ಕಸಬ ಗ್ರಾಮದ ಕಂದಡ್ಕದಲ್ಲಿ ನವೀನ್ ಕುಮಾರ್ ಎಂಬವರು ತಮ್ಮ ಮನೆಯ ಸುಮಾರು ನಲವತ್ತು ಅಡಿ ಆಳದ ಬಾವಿಯನ್ನು ಸ್ವಚ್ಛಗೊಳಿಸುವ ಸಲುವಾಗಿ ಬಾವಿಯೊಳಗೆ ಇಳಿದಿದ್ದರು.
ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ವೇಳೆ ಬಾವಿಯೊಳಗಿನ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದ್ದು, ಉಸಿರಾಟದ ತೊಂದರೆಯಿಂದ ಅವರು ಪ್ರಜ್ಞೆ ತಪ್ಪಿ ಬಾವಿಯಲ್ಲೇ ಕುಸಿದು ಬಿದ್ದಿದ್ದರು. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಬಾವಿಯೊಳಗೆ ಇಳಿದ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ಆಮ್ಲಜನಕದ ಕೊರತೆ ಇರುವುದನ್ನು ಅರಿತು ತಕ್ಷಣವೇ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರು. ಬಳಿಕ ಆಮ್ಲಜನಕ ಕಿಟ್ ಧರಿಸಿ ಮತ್ತೆ ಬಾವಿಗೆ ಇಳಿದು ಪ್ರಾಣಾಪಾಯದ ಸ್ಥಿತಿಯಲ್ಲಿದ್ದ ನವೀನ್ ಕುಮಾರ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು. ರಕ್ಷಿಸಲ್ಪಟ್ಟ ನವೀನ್ ಕುಮಾರ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಮಯೋಚಿತ ಚಿಕಿತ್ಸೆ ಮತ್ತು ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ನಾಗರಾಜ್ ಪೂಜಾರಿ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಅವರ ಸಾಹಸಮಯ ಕಾರ್ಯ ಮತ್ತೊಮ್ಮೆ ಜೀವ ರಕ್ಷಣೆಯ ಮಹತ್ವವನ್ನು ಎತ್ತಿ ತೋರಿಸಿದೆ. ಈ ಕಾರ್ಯಾಚರಣೆಯಲ್ಲಿ ಸುಳ್ಯ ಅಗ್ನಿಶಾಮಕ ಠಾಣಾಧಿಕಾರಿಯಾದ ಕಿರಣ್ ಕುಮಾರ್ ಹಾಗೂ ಸಿಬ್ಬಂದಿಯವರಾದ ನಾಗರಾಜ , ಮಹಮ್ಮದ್ ರಫಿಕ್ , ಹರ್ಷವರ್ಧನ್, ಮೋಹನ್ ಬಾಬು, ಹರೀಶ್ ಗೌಡ, ಆನಂದ್, ರಾಜೇಶ್ ಎಸ್ ಕೆ. ಭಾಗವಹಿಸಿದ್ದರು.







