FoodPlanetPrize2026: ಭಾರತೀಯ ಕೃಷಿ ಇತಿಹಾಸದಲ್ಲೇ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಅದ್ಭುತ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ! ಆಂಧ್ರಪ್ರದೇಶದ ಬರೋಬ್ಬರಿ 18 ಲಕ್ಷ ರೈತರ ಧೀರ ಸೇನೆ ಜಾಗತಿಕ ಮಟ್ಟದ ಅತ್ಯುನ್ನತ ‘ಫುಡ್ ಪ್ಲಾನೆಟ್ ಪ್ರೈಸ್ 2026’ (Food Planet Prize 2026) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸ್ವೀಡನ್ನ ಬಾಸ್ಟಾಡ್ನಲ್ಲಿ ನಡೆದ ಜಾಗತಿಕ ಮಟ್ಟದ ಅದ್ಧೂರಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸ್ವೀಡನ್ನ ಪ್ರಖ್ಯಾತ ‘ಕರ್ಟ್ ಬರ್ಗ್ಫೋರ್ಸ್ ಫೌಂಡೇಶನ್’ ನೀಡುವ ಈ ಪ್ರಶಸ್ತಿಯನ್ನು ಕೃಷಿ ಮತ್ತು ಪರಿಸರ ಕ್ಷೇತ್ರದ ‘ಆಸ್ಕರ್’ ಎಂದೇ ಪರಿಗಣಿಸಲಾಗುತ್ತದೆ. ಇನ್ನು ಈ ಪ್ರಶಸ್ತಿಯು ಬರೋಬ್ಬರಿ 1.5 ಮಿಲಿಯನ್ ಯುಎಸ್ ಡಾಲರ್, ಅಂದರೆ ನಮ್ಮ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹12.5 ಕೋಟಿಗೂ ಹೆಚ್ಚು ನಗದು ಬಹುಮಾನವನ್ನು ಒಳಗೊಂಡಿದೆ!
ಆಂಧ್ರಪ್ರದೇಶ ಸರ್ಕಾರದ ‘ಕಮ್ಯುನಿಟಿ ಮ್ಯಾನೇಜ್ಡ್ ನ್ಯಾಚುರಲ್ ಫಾರ್ಮಿಂಗ್’ (APCNF – ಸಮುದಾಯ ಆಧಾರಿತ ನೈಸರ್ಗಿಕ ಕೃಷಿ) ಯೋಜನೆಯು ಇಂದು ಜಗತ್ತಿನ ಅತಿ ದೊಡ್ಡ ಪರಿಸರಸ್ನೇಹಿ ಕೃಷಿ ಆಂದೋಲನವಾಗಿ ಮಾರ್ಪಟ್ಟಿದೆ.
ರಾಸಾಯನಿಕ ಮುಕ್ತ ಕ್ರಾಂತಿ: ವಿಷಕಾರಿ ಕೃತಕ ಗೊಬ್ಬರ ಹಾಗೂ ಕೀಟನಾಶಕಗಳಿಗೆ ಸಂಪೂರ್ಣ ಬ್ರೇಕ್ ಹಾಕಿ, ಕೇವಲ ಸಾಂಪ್ರದಾಯಿಕ ಮತ್ತು ನೈಸರ್ಗಿಕ ಪದ್ಧತಿಗಳ ಮೂಲಕ ಭೂಮಿಯ ಫಲವತ್ತತೆಯನ್ನು ಮರಳಿ ತರಲಾಗಿದೆ.
ವಿಶ್ವ ದಾಖಲೆಯ ವ್ಯಾಪ್ತಿ: ರಾಜ್ಯದ ಸುಮಾರು 8,000ಕ್ಕೂ ಹೆಚ್ಚು ಹಳ್ಳಿಗಳ 18 ಲಕ್ಷ ರೈತ ಕುಟುಂಬಗಳು ಈ ಯೋಜನೆಯಡಿ ಒಂದಾಗಿ, ಹಸಿರು ಕ್ರಾಂತಿಗೆ ಹೊಸ ಭಾಷ್ಯ ಬರೆದಿದ್ದಾರೆ.
ಜಾಗತಿಕ ತಾಪಮಾನ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನಾದ್ಯಂತ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಆದರೆ, ಆಂಧ್ರದ ರೈತರ ಈ ನೈಸರ್ಗಿಕ ಕೃಷಿ ಪದ್ಧತಿಯು ಭೀಕರ ಚಂಡಮಾರುತ ಮತ್ತು ಬರಗಾಲದ ಸಂದರ್ಭದಲ್ಲೂ ದೃಢವಾಗಿ ನಿಂತು ಉತ್ತಮ ಇಳುವರಿ ನೀಡುವ ಮೂಲಕ ಜಾಗತಿಕ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ಜೊತೆಗೆ, ಗ್ರಾಹಕರಿಗೆ ವಿಷಮುಕ್ತ ಶುದ್ಧ ಆಹಾರವನ್ನು ಖಾತರಿಪಡಿಸಿದೆ.
ಹೀಗಾಗಿಯೇ, ಭಾರತದ 22 ರಾಜ್ಯಗಳು ಈಗಾಗಲೇ ಈ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿ ತಮ್ಮಲ್ಲಿ ಜಾರಿಗೆ ತರುತ್ತಿವೆ.
ಆಂಧ್ರದ ಈ ಯಶಸ್ಸು ಈಗ ನಮ್ಮ ಹೆಮ್ಮೆಯ ಕರ್ನಾಟಕದ ರೈತರಲ್ಲೂ ಹೊಸ ಭರವಸೆಯನ್ನು ಮೂಡಿಸಿದೆ. ವಿಶೇಷವಾಗಿ ಹವಾಮಾನ ಏರುಪೇರು ಎದುರಿಸುವ ನಮ್ಮ ಕರಾವಳಿಯ ರೈತರು “ಇಂತಹದ್ದೇ ಒಂದು ಕ್ರಾಂತಿ ನಮ್ಮಲ್ಲೂ ಆಗಬಾರದೇ?” ಎಂಬ ಆಶಾಭಾವನೆ ಹೊಂದಿದ್ದಾರೆ.
ಆದರೆ ಸದ್ಯದ ಕಟು ವಾಸ್ತವ ಎಂದರೆ, ನಮ್ಮ ಕೃಷಿ ಇಲಾಖೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತೀವ್ರ ಕೊರತೆಯಿದೆ. ಈ ಕೊರತೆಯ ನಡುವೆಯೂ ಸರ್ಕಾರ ಮನಸ್ಸು ಮಾಡಿ, ಆಂಧ್ರ ಮಾದರಿಯನ್ನು ಇಲ್ಲಿನ ಮಣ್ಣಿಗೆ ತಕ್ಕಂತೆ ರೂಪಿಸಿದರೆ, ಕರಾವಳಿ ರೈತನ ಕಷ್ಟದ ಕೃಷಿ ಬದುಕಿಗೆ ಹೊಸ ಬೆಳಕು ಸಿಗುವುದರಲ್ಲಿ ಸಂಶಯವಿಲ್ಲ.
ಸರ್ಕಾರ ಮತ್ತು ಕೃಷಿ ಇಲಾಖೆ ಆಂಧ್ರದ ಈ ವಿಶ್ವದಾಖಲೆಯ ಸಾಧನೆಯಿಂದ ಪಾಠ ಕಲಿತು, ನಮ್ಮ ರಾಜ್ಯದಲ್ಲೂ ನೈಸರ್ಗಿಕ ಕೃಷಿಗೆ ಆನೆಬಲ ನೀಡಲಿ ಎಂಬುವುದೇ ಕನ್ನಡಿಗರ ಆಶಯ.







