ಮೂಡುಬಿದಿರೆ: ಕಳೆದ ಗುರುವಾರದಿಂದ ನಾಪತ್ತೆಯಾಗಿದ್ದ ಮೂಡುಬಿದಿರೆಯ ಯುವಕನೊಬ್ಬ ಶನಿವಾರ ಬೆಳಗ್ಗೆ ತಮ್ಮ ಮನೆಯ ಸಮೀಪದಲ್ಲೇ ಮೃತದೇಹವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಅಲಂಗಾರು ಆಶ್ರಯ ಕಾಲನಿ ಸಮೀಪದ ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಎಂದು ಗುರುತಿಸಲಾಗಿದೆ. ಕಾರ್ತಿಕ್ ಅವರು ಅವಿವಾಹಿತರಾಗಿದ್ದು, ವೃತ್ತಿಯಲ್ಲಿ ಹಿಟಾಚಿ ಹಾಗೂ ಜೆಸಿಬಿ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ವಿವರ:
ಕಾರ್ತಿಕ್ ಶೆಟ್ಟಿ ಅವರು ಕಳೆದ ಗುರುವಾರದಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಹಾಗೂ ಸ್ನೇಹಿತರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಶನಿವಾರ ಬೆಳಗ್ಗೆ ಅವರ ಮನೆಯ ಸಮೀಪದ ಶೆಡ್ನ ಹೊರಭಾಗದಲ್ಲಿ ಕಾರ್ತಿಕ್ ಅವರ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಾರ್ತಿಕ್ ಅವರು ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





