ಮಂಗಳೂರು: ನಗರದ ಲೇಡಿಹಿಲ್ನಲ್ಲಿ ತಡರಾತ್ರಿ ವಿವಾಹಿತೆಯೊಬ್ಬರು ತಮ್ಮ ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ನಡೆದಿದೆ. 22 ವರ್ಷದ ದೇವಮ್ಮ ನಾಪತ್ತೆಯಾಗಿರುವ ವಿವಾಹಿತೆ.

ಜೂನ್ 15ರಂದು ರಾತ್ರಿ ಸುಮಾರು 8:30ರ ವೇಳೆಗೆ ಲೇಡಿಹಿಲ್ ಬಳಿಯಿರುವ ಅಪಾರ್ಟೆಂಟ್ ಒಂದರಲ್ಲಿದ್ದ ತಮ್ಮ ಮನೆಯಿಂದ ದೇವಮ್ಮ ಅವರು ಹೊರಗೆ ಹೋಗಿದ್ದಾರೆ. ಆದರೆ, ಹೊರಗೆ ಹೋದವರು ತಡರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ.
ಸಾಮಾನ್ಯವಾಗಿ ಎಲ್ಲರೂ ಮೊಬೈಲ್ ಜೊತೆಯಲ್ಲೇ ಕೊಂಡೊಯ್ಯುತ್ತಾರೆ, ಆದರೆ ದೇವಮ್ಮ ಅವರು ತಮ್ಮ ಮೊಬೈಲ್ ಫೋನನ್ನು ಮನೆಯಲ್ಲೇ ಬಿಟ್ಟು ಹೋಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡಿಜಿಟಲ್ ಸಂಪರ್ಕವಿಲ್ಲದೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಸದ್ಯಕ್ಕೆ ಯಾರಿಗೂ ತಿಳಿದಿಲ್ಲ.
ಈ ಬಗ್ಗೆ ಆಕೆಯ ಪತಿ ಬೀರಪ್ಪ ಅವರು ಆತಂಕಗೊಂಡು ತಕ್ಷಣವೇ ಉರ್ವ ಪೊಲೀಸ್ ಠಾಣೆಗೆ ಧಾವಿಸಿ ಲಿಖಿತ ದೂರು ನೀಡಿದ್ದಾರೆ. ಪತಿ ನೀಡಿದ ದೂರಿನ ಮೇರೆಗೆ ಉರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ಹಾಗೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.







