ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ವಾಹನ ಹಾಗೂ ಸಾರ್ವಜನಿಕರ ಸಂಚಾರ ದುಸ್ತರವಾಗಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿರುವ ಸ್ಥಳೀಯ ನಿವಾಸಿಗಳು ಹಾಗೂ ರಿಕ್ಷಾ ಚಾಲಕರು ಇಂದು ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ನಡೆಸಿದರು.
ದೊಡ್ಡ ದೊಡ್ಡ ಹೊಂಡಗಳು; ಕನಿಷ್ಠ ದುರಸ್ತಿಯೂ ಇಲ್ಲ!:
ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ 5 ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟುಹೋಗಿದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಕನಿಷ್ಠ ಮಟ್ಟದ ದುರಸ್ತಿ ಕಾರ್ಯವೂ ನಡೆದಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದು, “ರಸ್ತೆ ಸರಿಪಡಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲಾಗುವುದು” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ವರ್ಷದ ಹಿಂದಿನ ಭರವಸೆ ಹುಸಿ!:
“ವರ್ಷದ ಹಿಂದೆಯೂ ಇದೇ ರಸ್ತೆ ಸಮಸ್ಯೆಗಾಗಿ ನಾವು ಪ್ರತಿಭಟನೆ ನಡೆಸಿದ್ದೆವು. ಆಗ ಸ್ಥಳೀಯ ಜನಪ್ರತಿನಿಧಿಗಳು ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆಗಳು ಕೇವಲ ಮಾತಿಗೆ ಸೀಮಿತವಾಗಿವೆ. ನಾವು ನೀಡಿದ ಹತ್ತಾರು ಮನವಿಗಳು ಬೂದಿಯಲ್ಲಿ ಹೋಮ ಮಾಡಿದಂತಾಗಿವೆ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು, ಸಾರ್ವಜನಿಕರ ಪರದಾಟ:
ಈ ರಸ್ತೆಯು ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಬಳಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಆದರೆ ರಸ್ತೆಯ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ನಡೆದುಕೊಂಡು ಹೋಗುವ ಪಾದಚಾರಿಗಳೂ ಕೂಡ ಹೊಂಡ-ಗುಂಡಿ ತಪ್ಪಿಸಲು ಪರದಾಡುವಂತಾಗಿದೆ. ಆಟೋ ರಿಕ್ಷಾಗಳಂತೂ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.







