ಬೆಳ್ತಂಗಡಿ: ಪ್ರವಾಸ ಮುಗಿಸಿ ಖುಷಿಖುಷಿಯಾಗಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳ ಬಾಳಿನಲ್ಲಿ ವಿಧಿಯಾಟ ಆಡಿದೆ.

ಬೆಳ್ತಂಗಡಿಯ ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಜಂಕ್ಷನ್ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತಪಟ್ಟ ದುರ್ದೈವಿ ವಿದ್ಯಾರ್ಥಿಯನ್ನು ಮಂಗಳೂರು ನಿವಾಸಿ, 23 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ. ಧೀರಜ್ ಮಂಗಳೂರಿನ ಕಾಲೇಜೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ನಾಲ್ವರು ಸ್ನೇಹಿತರು ಸೇರಿ ಬೈಕ್ನಲ್ಲಿ ಕೊಟ್ಟಿಗೆಹಾರ ಸಮೀಪದ ದೇವರ ಮನೆಗೆ ಪ್ರವಾಸಕ್ಕೆ ತೆರಳಿದ್ದರು. ಸಂಜೆ ದೇವರ ಮನೆ ದರ್ಶನ ಮುಗಿಸಿ ವಾಪಸ್ ಮಂಗಳೂರಿಗೆ ಹಿಂತಿರುಗುತ್ತಿದ್ದಾಗ ಈ ದಾರುಣ ಘಟನೆ ಸಂಭವಿಸಿದೆ. ಲಾಯಿಲ ಜಂಕ್ಷನ್ ತಲುಪುತ್ತಿದ್ದಂತೆ ಇವರ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ಈ ವೇಳೆ ಬೈಕ್ನ ಹಿಂಬದಿ ಕುಳಿತಿದ್ದ ಧೀರಜ್ ಅವರ ತಲೆಗೆ ಗಂಭೀರ ಪೆಟ್ಟಾಗಿ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸದ್ಯ ಗಾಯಗೊಂಡಿರುವ ಬೈಕ್ ಸವಾರನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





