ಬೆಂಗಳೂರು : ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಖ್ಯಾತ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿಗೆ ಈಗ ಬಿಗ್ ಶಾಕ್ ಎದುರಾಗಿದೆ! ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಗುರೂಜಿ ವಿರುದ್ಧ ಈಗ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.

ಹಾಗಾದ್ರೆ ಗುರೂಜಿ ವಿರುದ್ಧ ದೂರು ಕೊಟ್ಟಿದ್ದು ಯಾರು? ದೇವಿ ಮಹಾಲಕ್ಷ್ಮಿ ಮತ್ತು ಮಹಿಳೆಯರ ಬಗ್ಗೆ ಆರ್ಯವರ್ಧನ್ ಆಡಿದ ಆ ಒಂದು ಮಾತು ಅವರಿಗೆ ಮುಳುವಾಯ್ತಾ?
ಮಹಿಳೆಯರು ಮತ್ತು ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಪದಗಳನ್ನು ಬಳಸಿದ್ದಕ್ಕಾಗಿ ಆರ್ಯವರ್ಧನ್ ಗುರೂಜಿ ವಿರುದ್ಧ ಈಗ ಕಾನೂನು ಉರುಳು ಬಿಗಿಯಾಗಿದೆ. ಸುಮನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ಶಂಕರಪುರಂ ಠಾಣೆ ಪೊಲೀಸರು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ದೇವಿ ಮಹಾಲಕ್ಷ್ಮಿಗೆ ಅವಮಾನ ಆರೋಪ!:
ಆರ್ಯವರ್ಧನ್ ಗುರೂಜಿ ಖಾಸಗಿ ಸಾಮಾಜಿಕ ಜಾಲತಾಣವೊಂದರಲ್ಲಿ ಮಾತನಾಡುತ್ತಾ, ದೇವಿ ಮಹಾಲಕ್ಷ್ಮಿ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಮಾನವನ ದೇಹದ ಒಂದು ನಿರ್ದಿಷ್ಟ ಅಂಗದಲ್ಲಿ ಮಹಾಲಕ್ಷ್ಮಿ ನೆಲೆಸಿದ್ದು, ಅದನ್ನು ಪೂಜಿಸಬೇಕು ಎಂದು ಅಸಭ್ಯ ಶಬ್ದಗಳನ್ನು ಬಳಸಿ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಇದು ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಷ್ಟೇ ಅಲ್ಲದೆ, ಇಡೀ ಮಹಿಳಾ ಸಮುದಾಯದ ಗೌರವಕ್ಕೆ ಧಕ್ಕೆ ತಂದಿದೆ ಮತ್ತು ಮಹಿಳೆಯರನ್ನು ಶಾರೀರಿಕವಾಗಿ ಹಾಗೂ ಮಾತಿನ ಮೂಲಕ ಅವಮಾನಿಸಿದಂತಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿವಾದಾತ್ಮಕ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ಸಮಾಜದಲ್ಲಿ ಅಶಾಂತಿ ಉಂಟು ಮಾಡಲು ಗುರೂಜಿ ಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ದೂರನ್ನು ಸ್ವೀಕರಿಸಿದ ಶಂಕರಪುರಂ ಪೊಲೀಸರು ಮೊದಲು ಎಲ್.ಪಿ.ಟಿ (LPT) ದಾಖಲಿಸಿಕೊಂಡಿದ್ದರು. ಆ ಬಳಿಕ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯದ ವರದಿಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿದ್ದ ವಿಡಿಯೋ ತುಣುಕುಗಳನ್ನು ಸಂಗ್ರಹಿಸಿ, ಅವುಗಳ ಸತ್ಯಾಸತ್ಯತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಈಗ ಆರ್ಯವರ್ಧನ್ ಗುರೂಜಿ ವಿರುದ್ಧ ಅಧಿಕೃತವಾಗಿ ಕೇಸ್ ದಾಖಲಿಸಿದ್ದಾರೆ.






