ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಅಜ್ಜಿಹಿತ್ಲುವಿನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಖಾಸಗಿ ಲಾಡ್ಜ್ನಲ್ಲಿ ತಂಗಿದ್ದ ರಾಮನಗರ ಮೂಲದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಉಚ್ಚಮ್ಮನದೊಡ್ಡಿ ನಿವಾಸಿಯಾದ 30 ವರ್ಷದ ಮಧು ಎಸ್ ಮೃತಪಟ್ಟ ದುರ್ದೈವಿ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಧು ಅವರು ಜುಲೈ 8ರಂದು ಅಜ್ಜಿಹಿತ್ಲುವಿನ ಈ ಖಾಸಗಿ ಲಾಡ್ಜ್ನಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆದರೆ, ಜುಲೈ 9ರ ಗುರುವಾರ ಸಂಜೆಯಾದರೂ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ.
ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ, ಬಾಗಿಲು ತಟ್ಟಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಕಿಟಕಿಯ ಮೂಲಕ ಇಣುಕಿ ನೋಡಿದ್ದಾರೆ. ಈ ವೇಳೆ ಮಧು ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದೆ. ತಕ್ಷಣವೇ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಲಾಡ್ಜ್ನ ಲೀಝುದಾರರಾದ ಜಗದೀಶ್ ಪಡ್ಡು ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 15/2026ರಂತೆ ಪ್ರಕರಣ ದಾಖಲಾಗಿದೆ. ಹೊಸ ಕಾನೂನು ಬಿಎನ್ಎಸ್ಎಸ್ (BNSS) ಕಲಂ 194(3)(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವಕನ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದರ ಕುರಿತು ತೀವ್ರ ತನಿಖೆ ಕೈಗೊಂಡಿದ್ದಾರೆ.






