ಉಡುಪಿ: ಚದುರಂಗ ಆಟವು ಶಿಸ್ತು, ಸಹನೆ ಮತ್ತು ಕಾರ್ಯಬದ್ಧತೆಯನ್ನು ಕಲಿಸುತ್ತದೆ. ಮಾನಸಿಕವಾಗಿ ಸಿದ್ಧರಾಗಿ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧಿಸಲು ಇದು ನೆರವಾಗುತ್ತದೆ ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಪಾಂಡುರಂಗ ಪೈ ಅವರು ಅಭಿಪ್ರಾಯಪಟ್ಟರು.

ಅವರು ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪ್ರಾಯೋಜಿತ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ 2026 ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆಯೊಂದಿಗೆ ಕ್ರೀಡೆಯೂ ಅಷ್ಟೇ ಮುಖ್ಯ. ಅಂತಹ ಕ್ರೀಡೆಗಳಲ್ಲಿ ಚದುರಂಗ ಒಂದು ಉತ್ತಮ ಕ್ರೀಡೆಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಾಂಡುರಂಗ ಪೈ ರವರು ವಹಿಸಿದ್ದರು. ವೇದಿಕೆಯಲ್ಲಿ ಡ್ಯುಯಲ್ ಸ್ಟಾರ್ ಶಾಲೆಯ ಅಧ್ಯಕ್ಷರಾದ ಶ್ರೀ ಗುರುರಾಜ್ ಅಡಿಗ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಶ್ರೀ ಮಹೇಶ್ ಹೈಕಾಡಿ, ಜಿಲ್ಲಾ ಕ್ರೀಡಾ ಪ್ರಮುಖ್ ಶ್ರೀ ವಿಜಯ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಧಿಕಾ ಎಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕುಮಾರ್ ಮತ್ತು ವಿದ್ಯಾರ್ಥಿ ನಾಯಕಿ ಕು. ಮಾನ್ಯ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಥ್ಲೆಟಿಕ್ಸ್ ಕ್ರೀಡಾಪಟುಗಳಾದ *ಅದಿತಿ ಹೆಮ್ಮಣ್ಣ, ಪೂಜಿತಾ, ಧ್ರುವ ಭಾಗವತ್, ವಿನಿಷ, ನಿಷ್ಮ, ಭೈರವಿ ಇವರುಗಳನ್ನು ಸನ್ಮಾನಿಸಲಾಯಿತು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಯ 5 ಸಂಸ್ಥೆಗಳಿಂದ 55 ಬಾಲಕರು,37 ಬಾಲಕಿಯರು ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಗುರೂಜಿ ಮಾತಾಜಿಯವರು ಜಿಲ್ಲಾ ಸಮಿತಿ ಯವರು ಸೇರಿದಂತೆ ಒಟ್ಟು 115 ಮಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಶಾರೀರಿಕ ಪ್ರಮುಖ್ ಶ್ರೀ ವಿಜಯ ಕುಮಾರ ಶೆಟ್ಟಿ
ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ರಾಧಿಕಾ ಎಸ್ ವಂದಿಸಿದರು. ಶ್ರೀ ವಿಘ್ನೇಶ್ ಜಿ.ಎಲ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ,ಪ್ರಮಾಣಪತ್ರ ವಿತರಿಸಲಾಯಿತು.







