ಬಂಟ್ವಾಳ: ತಾಲೂಕಿನ ಕೆದಿಲ ಗ್ರಾಮದ ಗಾಂಧಿನಗರ ಗ್ರಾಮ ಪಂಚಾಯತ್ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಾರು ಚಾಲಕರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾರ್ಗಕ್ಕೆ ಅಡ್ಡವಾಗಿ ತೆಂಗಿನಮರ ಬಿದ್ದ ಪರಿಣಾಮ, ಅದರ ಒತ್ತಡಕ್ಕೆ ಸಿಲುಕಿ ವಿದ್ಯುತ್ ಕಂಬವೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


ತಕ್ಷಣ ಸ್ಪಂದಿಸಿದ “ಶೌರ್ಯ” ವಿಪತ್ತು ನಿರ್ವಹಣಾ ಘಟಕ:
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಮೆಸ್ಕಾಂ ಲೈನ್ ಮ್ಯಾನ್ ಹಾಗೂ ಸ್ಥಳೀಯ ಊರವರ ಪೂರ್ಣ ಸಹಕಾರದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು.

ಸ್ಥಳೀಯರ ಸಮಯಪ್ರಜ್ಞೆ ಹಾಗೂ ಶೌರ್ಯ ತಂಡದ ತಕ್ಷಣದ ಮುನ್ನೆಚ್ಚರಿಕಾ ಕ್ರಮದಿಂದಾಗಿ ಮತ್ತಷ್ಟು ದೊಡ್ಡ ಅನಾಹುತ ತಪ್ಪಿದಂತಾಗಿದೆ. ತಕ್ಷಣವೇ ಸ್ಪಂದಿಸಿ ರಸ್ತೆ ಸುಗಮಗೊಳಿಸಿದ ವಿಪತ್ತು ನಿರ್ವಹಣಾ ತಂಡ ಮತ್ತು ಸಾರ್ವಜನಿಕರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.







