ಸುರತ್ಕಲ್: ಮಂಗಳೂರಿನ ಸುರತ್ಕಲ್ನ ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಒಟ್ಟಿಗೆ ವಾಸವಿದ್ದ ಸ್ವಂತ ಅಣ್ಣನೇ, ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ದಾರುಣವಾಗಿ ಕೊಲೆ ಮಾಡಿದ್ದಾನೆ.


ಕೊಲೆಯಾದ ದುರ್ದೈವಿ ಯುವಕನನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ಮೂಲದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದೆ. ಈತನ ಸ್ವಂತ ಅಣ್ಣ ಸೋಮನಾಥ್ (21) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಸಹೋದರರಿಬ್ಬರೂ ಸದ್ಯ ಸುರತ್ಕಲ್ನ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಒಟ್ಟಿಗೆ ವಾಸವಿದ್ದರು. ರವಿವಾರ ತಡರಾತ್ರಿ ತಮ್ಮ ಮಲ್ಲಿಕಾರ್ಜುನ ಗಾಢ ನಿದ್ರೆಯಲ್ಲಿದ್ದಾಗ, ಆರೋಪಿ ಅಣ್ಣ ಸೋಮನಾಥ್ ಆತನ ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಘಟನೆಗೆ ಖಚಿತ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದ್ದು, ಸುರತ್ಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.







