ಧರ್ಮಸ್ಥಳ : ಧರ್ಮಸ್ಥಳದ ಶಾಂತಿವನ ಟ್ರಸ್ಟ್ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಈ ಶೈಕ್ಷಣಿಕ ವರ್ಷದ ‘ಜ್ಞಾನ ಚಂದನ’ ಹಾಗೂ ‘ಜ್ಞಾನ ನಂದನ’ ಕೃತಿಗಳ ಬಿಡುಗಡೆ ಆಗಸ್ಟ್ 1ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಈ ವಿಶೇಷ ಕಾರ್ಯಕ್ರಮ ನೆರವೇರಲಿದೆ.

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಪ್ರತಿ ವರ್ಷ ಶಾಲಾ ವಿದ್ಯಾರ್ಥಿಗಳಿಗಾಗಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪ್ರಸಕ್ತ ಶೈಕ್ಷಣಿಕ ವರ್ಷಕ್ಕಾಗಿ ಸಿದ್ಧಪಡಿಸಲಾದ “ಜ್ಞಾನ ಚಂದನ” ಮತ್ತು “ಜ್ಞಾನ ನಂದನ” ಕೃತಿಗಳನ್ನು ಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಪ್ರಸಿದ್ಧ ಅಂಕಣ ಬರಹಗಾರ್ತಿ ದೀಪಾ ಹಿರೇಗುತ್ತಿ ಅವರು ಬಿಡುಗಡೆಗೊಳಿಸಲಿದ್ದಾರೆ ಎಂದು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಜಗನ್ನಾಥ್ ಮತ್ತು ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ‘ಅಂಚೆ-ಕುಂಚ ಸ್ಪರ್ಧೆ’ಯ ವಿಜೇತರಿಗೆ ಪುರಸ್ಕಾರ ಸಮಾರಂಭ ನಡೆಯಲಿದೆ. ಪೂಜ್ಯ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಲನಚಿತ್ರ ನಟ ಅಭಿಜಿತ್ ಅವರು ಆಗಮಿಸಿ ಶುಭಾಶಂಸನೆ ಮಾಡಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ್, ಶಾಂತಿವನ ಟ್ರಸ್ಟ್ನ ಟ್ರಸ್ಟಿಗಳಾದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಗೌರವ ಉಪಸ್ಥಿತರಿರಲಿದ್ದಾರೆ.


ಸಮಾರಂಭದ ಭಾಗವಾಗಿ ಉಜಿರೆಯ ಎಸ್.ಡಿ.ಎಮ್. ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ಗಾಯನ ಮತ್ತು ನೃತ್ಯ ಕಾರ್ಯಕ್ರಮ ನೆರವೇರಲಿದ್ದು, ಖ್ಯಾತ ಕುಂಚಕಲಾವಿದ ಪೆರ್ಮುದೆ ಮೋಹನಕುಮಾರ್ ಅವರಿಂದ ಜೀವಂತ ಚಿತ್ರಕಲಾ ಪ್ರದರ್ಶನ ಮೂಡಿಬರಲಿದೆ.






