ಬೆಳ್ತಂಗಡಿ: ಬೆಂಗಳೂರಿನ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಯುವಕನೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಗೆ ಗ್ರಾಮದ ಎಳನೀರು ನಿವಾಸಿ ಸುಮಂತ್ ಜೈನ್ (32) ಹಾಗೂ ಅವರ ಪತ್ನಿ, ಹುಬ್ಬಳ್ಳಿ ಮೂಲದ ಪದ್ಮಾವತಿ (29) ಎಂದು ಗುರುತಿಸಲಾಗಿದೆ. ಸುಮಂತ್ ಜೈನ್ ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಪತ್ನಿ ಪದ್ಮಾವತಿ ವೈಟ್ಫೀಲ್ಡ್ ಸಮೀಪದ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಸ್ಟ್ 13 ರಂದು ಮಧ್ಯರಾತ್ರಿ ದಂಪತಿ ನಡುವೆ ತೀವ್ರ ಸ್ವರೂಪದ ಕೌಟುಂಬಿಕ ಗಲಾಟೆ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಸುಮಂತ್ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆಯ ನಂತರ ತನ್ನ ತಾಯಿಗೆ ವಾಯ್ಸ್ ಮೆಸೇಜ್ ಕಳುಹಿಸಿರುವ ಸುಮಂತ್, “ನಾನು ಸಾಯುತ್ತಿದ್ದೇನೆ, ನನ್ನ ಪಿಎಫ್ ಹಣ ಹಾಗೂ ಮನೆಯಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿ” ಎಂದು ತಿಳಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಗಸ್ಟ್ 14 ರಂದು ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಈ ದಂಪತಿಯ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸೊಕೋ (SOCO) ತಂಡ ಪರಿಶೀಲನೆ ನಡೆಸಿದೆ.






