ಮಂಗಳೂರು: ಮಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಂಗಿಯ ಅಗಲಿಕೆಯ ನೋವಿನಲ್ಲಿದ್ದ ಯುವಕನೊಬ್ಬ, ಗಲ್ಫ್ನಿಂದ ಮಂಗಳೂರಿಗೆ ಹಿಂತಿರುಗಿದ ಕೆಲವೇ ಗಂಟೆಗಳಲ್ಲಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.


ಮೃತನನ್ನು ಕೇರಳದ ಬೇಕಲ್ ಮೂಲದ 24 ವರ್ಷದ ಅರ್ಜುನ್ ಮಹೇಶ್ ಎಂದು ಗುರುತಿಸಲಾಗಿದೆ. ದುಬೈನಲ್ಲಿ ಆಟೋಮೊಬೈಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅರ್ಜುನ್, ಭಾನುವಾರ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದಿದ್ದರು. ಆದರೆ ಮನೆಗೆ ಹೋಗದೆ ಮಂಗಳೂರಿನ ಮರವೂರಿನಲ್ಲಿರುವ ಲಾಡ್ಜ್ವೊಂದರಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಸೋಮವಾರ ಮಧ್ಯಾಹ್ನ ಕೊಠಡಿಯಲ್ಲಿ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.


ಕಳೆದ ಜೂನ್ ತಿಂಗಳಲ್ಲಿ ಅರ್ಜುನ್ ಅವರ ತಂಗಿ 19 ವರ್ಷದ ಐಜಾ ಆರ್. ಕೋಚಿಂಗ್ ಸೆಂಟರ್ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂಗಿಯ ಅಕಾಲಿಕ ಅಗಲಿಕೆಯಿಂದ ಅರ್ಜುನ್ ತೀವ್ರ ಮಾನಸಿಕ ಖಿನ್ನತೆ ಮತ್ತು ನೋವಿನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

ಬಜಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಒಂದೇ ಕುಟುಂಬದ ಇಬ್ಬರು ಮಕ್ಕಳು ಕೆಲವೇ ತಿಂಗಳ ಅಂತರದಲ್ಲಿ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟುಮಾಡಿದೆ.






