ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಬಾಣಂತಿಯರನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವರ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ, ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿ ಆಟೋ ಚಾಲಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಈ ಘಟನೆಯ ಕುರಿತಾದ ಸಂಪೂರ್ಣ ವರದಿ ಇಲ್ಲಿದೆ ನೋಡಿ
ಸುಳ್ಯ ತಾಲೂಕಿನ ಸೂರ್ತಿಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹಾವೇರಿ ಮೂಲದ ವಿವಾಹಿತ ಮಹಿಳೆಯೊಬ್ಬರು ಈ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಬಾಣಂತಿಯರನ್ನು ನೋಡಿಕೊಳ್ಳುವ ವೃತ್ತಿ ಮಾಡುತ್ತಿದ್ದು, ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಜಯನಗರದ ಆಟೋ ಚಾಲಕ ಗೋಪಾಲಕೃಷ್ಣ ಎಂಬಾತನ ಪರಿಚಯವಾಗಿತ್ತು.

ದೂರಿನ ಪ್ರಕಾರ, ಜೂನ್ 2025ರಲ್ಲಿ ಆರೋಪಿ ಗೋಪಾಲಕೃಷ್ಣ ಮಹಿಳೆಯನ್ನು ಬಲವಂತವಾಗಿ ತನ್ನ ಮನೆಗೆ ಕರೆದೊಯ್ದು, ಮದ್ಯ ಸೇವನೆ ಮಾಡಿಸಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ಈ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಆರೋಪಿ, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. ಪದೇ ಪದೇ ಆಟೋದಲ್ಲಿ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಆಗಸ್ಟ್ 2ರಂದು ಆರೋಪಿ ಗೋಪಾಲಕೃಷ್ಣ ಮಹಿಳೆಯ ಬಾಡಿಗೆ ಮನೆ ಬಳಿ ಬಂದು, ಮತ್ತೆ ಮನೆಗೆ ಬರುವಂತೆ ಒತ್ತಾಯಿಸಿದ್ದ. ಬಾರದಿದ್ದರೆ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಗಂಡ ಮತ್ತು ಹೆಂಡತಿಯನ್ನು ಕಡಿದು ಕೊಲೆ ಮಾಡುವುದಾಗಿ ಮಾರಕಾಸ್ತ್ರದೊಂದಿಗೆ ಬಂದು ಗಲಾಟೆ ಮಾಡಿದ್ದ.

ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಸುಳ್ಯ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಯನಗರದಲ್ಲಿ ಸ್ಥಳ ಮಹಜರು ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿ ಗೋಪಾಲಕೃಷ್ಣನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.






