ಉಜಿರೆ: “ಭಾರತ ವಿಶ್ವಗುರುವಾಗುವ ಹಾದಿಯಲ್ಲಿ ಕರ್ನಾಟಕದ ಮಕ್ಕಳಾದ ನಮ್ಮ ಕೊಡುಗೆ ನಿರಂತರವಾಗಿರಲಿ. ಪರಿಶ್ರಮದಿಂದ ಕಲಿತ ಓದು ನಮ್ಮನ್ನು ಉತ್ತಮ ಹಾದಿಯಲ್ಲಿ ನಡೆಸುತ್ತದೆ.

ಈ ದಿನಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಎಂದೆಂದಿಗೂ ನಾವು ನೆನೆಯಬೇಕು” ಎಂದು ಉಜಿರೆ ಗ್ರಾಮ ಪಂಚಾಯತಿಯ ನಿವೃತ್ತ ಪಂಚಾಯತು ಅಭಿವೃದ್ಧಿ ಅಧಿಕಾರಿ ಶ್ರೀ ಪಿ. ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ ಇವರು ಹೇಳಿದರು.
ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಕನ್ನಡ ರಾಜ್ಯೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮ ಉದ್ಘಾಟಿಸಿ, ಮಾಸಿಕ ಕಾರ್ಯಚಟುವಟಿಕೆಗಳ ಅನಾವರಣಗೊಳಿಸಿ ವಿದ್ಯಾರ್ಥಿಗಳಿಗೆ ಕರ್ನಾಟಕದ ಇತಿಹಾಸ ಹಾಗೂ ಕನ್ನಡ ಭಾಷೆಯ ಹಿನ್ನೆಲೆಯ ಮಹತ್ವದ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶಾಲಾ ವಿದ್ಯಾರ್ಥಿಗಳಿಂದ ಗುಂಪುಗಾಯನ, ನೃತ್ಯ, ಕಗ್ಗ ಹಾಗೂ ಭಾಷಣ ಮಾಡಲಾಯಿತು.
ಶಾಲಾ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಿದ್ಯಾರ್ಥಿನಿಯರಾದ ರಿಷಿಕಾ ಹಾಗೂ ಅನ್ವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಧನ್ವಿ ಸ್ವಾಗತಿಸಿ, ವಿದ್ಯಾರ್ಥಿ ಪಾವನ್ ವಂದಿಸಿದರು.







