ಕಾಸರಗೋಡು: ಸಾಮಾಜಿಕ ಜಾಲತಾಣದ ದುರ್ಬಳಕೆಗೆ ಮತ್ತೊಂದು ಬೆಚ್ಚಿಬೀಳಿಸುವ ಉದಾಹರಣೆ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ. ಸ್ನಾಪ್ಚಾಟ್ ಮೂಲಕ ಪರಿಚಯಿಸಿಕೊಂಡು ಇಬ್ಬರು ಅಪ್ರಾಪ್ತ ಶಾಲಾ ಬಾಲಕಿಯರನ್ನು ಲಾಡ್ಜ್ಗೆ ಕರೆದೊಯ್ದಿದ್ದ ಇಬ್ಬರು ಯುವಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.



ಕಾಂಞಂಗಾಡ್ನ 14 ಮತ್ತು 16 ವರ್ಷದ ಇಬ್ಬರು ಶಾಲಾ ಬಾಲಕಿಯರಿಗೆ ಸ್ನಾಪ್ಚಾಟ್ನಲ್ಲಿ ಯುವಕರ ಪರಿಚಯವಾಗಿತ್ತು. ಆಗಸ್ಟ್ 16ರಂದು ಸ್ನೇಹಿತರನ್ನು ಭೇಟಿಯಾಗುವುದಾಗಿ ಮನೆಗೆ ಹೇಳಿ ಬಂದಿದ್ದ ಬಾಲಕಿಯರನ್ನು ಆರೋಪಿಗಳು ಕಾರಿನಲ್ಲಿ ಕಾಂಞಂಗಾಡ್ನಿಂದ ಕರೆದೊಯ್ದಿದ್ದರು. ಸಂಜೆಯಾದರೂ ಮಕ್ಕಳು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು ತಕ್ಷಣ ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯರ ಮೊಬೈಲ್ ಫೋನ್ ಟವರ್ ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿದಾಗ, ಬಾಲಕಿಯರು ಮಂಗಳೂರು ಸಮೀಪದ ಉಳ್ಳಾಲದ ಲಾಡ್ಜ್ನಲ್ಲಿರುವುದು ಪತ್ತೆಯಾಗಿದೆ. ತಕ್ಷಣವೇ ಉಳ್ಳಾಲದ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಬಾಲಕಿಯರನ್ನು ರಕ್ಷಿಸಿ, ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಮಂಜೇಶ್ವರ ಮೂಲದ ರಿಜ್ವಾನ್ (23) ಹಾಗೂ ಮುಹಮ್ಮದ್ ಸಾದ್ (19) ಎಂದು ಗುರುತಿಸಲಾಗಿದೆ.

ಬಾಲಕಿಯರ ಹೇಳಿಕೆಯನ್ನು ಆಧರಿಸಿ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವಾಗ ಎಚ್ಚರದಿಂದಿರಲು ಪೊಲೀಸರು ಈ ಮೂಲಕ ಹೆತ್ತವರಿಗೆ ಮತ್ತು ಮಕ್ಕಳಿಗೆ ಎಚ್ಚರಿಕೆ ನೀಡಿದ್ದಾರೆ.





