ಉಜಿರೆ, ನ. 2: ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಅವರಲ್ಲಿ ಸ್ವಯಂ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ‘ಸುರಕ್ಷಿತ್ ಬಚ್ಪನ್ ಅಭಿಯಾನ್’ (Surakshit Bachpan Abhiyan) ಅಂಗವಾಗಿ ಮಕ್ಕಳ ರಕ್ಷಣೆಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯ ವಿಶೇಷ ಶಿಕ್ಷಕಿ (Special Educator) ಅಲೀನಾ ಜಾನ್ ಅವರು ಮಕ್ಕಳಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO Act, 2012) ಕುರಿತು ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆ, ವೈಯಕ್ತಿಕ ಹಕ್ಕುಗಳು, ಸುರಕ್ಷಿತ ಮತ್ತು ಅಸುರಕ್ಷಿತ ಸನ್ನಿವೇಶಗಳನ್ನು ಗುರುತಿಸುವುದು ಹಾಗೂ ಅಪಾಯದ ಸಂದರ್ಭದಲ್ಲಿ ಯಾರ ಸಹಾಯವನ್ನು ಪಡೆಯಬೇಕು ಎಂಬುದರ ಕುರಿತು ವಿವರಿಸಿದರು.
ಪ್ರತಿಯೊಬ್ಬ ಮಗುವಿಗೂ ಸುರಕ್ಷಿತವಾದ ಬಾಲ್ಯವನ್ನು ಅನುಭವಿಸುವ ಹಕ್ಕಿದೆ. ತಮ್ಮ ಸುತ್ತಮುತ್ತಲಿನ ಅಸುರಕ್ಷಿತ ಪರಿಸ್ಥಿತಿಗಳನ್ನು ಗುರುತಿಸುವ ಸಾಮರ್ಥ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಯಾವುದೇ ಅಹಿತಕರ ಅನುಭವ ಅಥವಾ ಸಮಸ್ಯೆ ಎದುರಾದಾಗ ಭಯಪಡದೆ ಪೋಷಕರು, ಶಿಕ್ಷಕರು ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ರಕ್ಷಣೆಯು ಕೇವಲ ಪೋಷಕರು ಅಥವಾ ಶಿಕ್ಷಕರ ಜವಾಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಮಕ್ಕಳಿಗೆ ಸುರಕ್ಷಿತ, ಸಂತೋಷದಾಯಕ ಹಾಗೂ ಆತ್ಮವಿಶ್ವಾಸದಿಂದ ಕೂಡಿದ ಬಾಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.

ಮಕ್ಕಳಲ್ಲಿ ಜಾಗೃತಿ, ಆತ್ಮವಿಶ್ವಾಸ ಹಾಗೂ ಸುರಕ್ಷತೆಯ ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ಶಿಕ್ಷಕಿ ಶ್ರೀಮತಿ ಶೋಭಿತ ಕಾರ್ಯಕ್ರಮ ನಿರೂಪಿಸಿದರು.






