ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ನಾವಿದ್ದೇವೆ. ದೇವಸ್ಥಾನ ಉಜಿರೆಯ ಅಸ್ಮಿತೆ ಇದ್ದಂತೆ. ನಮ್ಮಂಥ ಅನೇಕರಲ್ಲಿ ಜೀವನೋತ್ಸಾಹ ತುಂಬಿದ ಶ್ರದ್ಧಾಕೇಂದ್ರವಿದು. ಆರ್.ಎಸ್.ಎಸ್. ಶತ (೧೦೦) ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಜನಾರ್ದನ ಸ್ವಾಮಿ ಪರಿವಾರ ದೇವರ ಮೂರನೇ ಬ್ರಹ್ಮಕಲಶೋತ್ಸವ ಇದೇ ವರ್ಷದಂದು ನಡೆಯುತ್ತಿರುವುದು ನನ್ನಂತಹ ಅನೇಕ ಸ್ವಯಂಸೇವಕರಿಗೆ ಇದು ಅವಿಸ್ಮರಣೀಯ ವರ್ಷವೇ ಆಗಿದೆ.

ಆರ್.ಎಸ್.ಎಸ್ 100ರ ಸಂಭ್ರಮದಲ್ಲಿ ನಾವು ಮೊದಲಿಗೆ ನೆನೆಸಬೇಕಾದ್ದೇ ವಿಜಯಣ್ಣನವರನ್ನು. ನಮ್ಮ ತಾಲೂಕಿನ ಆರ್.ಎಸ್.ಎಸ್. ಚಟುವಟಿಕೆ ಆರಂಭವಾದದ್ದೇ ಉಜಿರೆಯಲ್ಲಿ. ಇಲ್ಲಿನ ಜನಾರ್ದನ ದೇವಸ್ಥಾನವೇ ಸಂಘದ ಪ್ರಮುಖ ಸ್ಥಾನವಾಗಿತ್ತು. ದೇವಸ್ಥಾನದ ಆವರಣದಲ್ಲೇ ಎಷ್ಟೋ ಸಂಘ ಬೈಠಕ್ಗಳು ನಡೆದಿದ್ದು, ನಾಡಿಗೆ ಹತ್ತಾರು ಸ್ವಯಂಸೇವಕರನ್ನು ನೀಡಿದ ಹೆಗ್ಗಳಿಗೆ ಈ ದೇವಸ್ಥಾನಕ್ಕೆ ಸಲ್ಲುತ್ತದೆ.

ದೇಗುಲದ ರಥದ ಶೆಡ್ಡಿನ ಬದಿಯಲ್ಲಿ ಸಂಘದ ಕಾರ್ಯಾಲಯವಿತ್ತು. ಅಲ್ಲಿ ಶೇಷಗಿರಿ ಶೆಣೈಯವರ ಕೊಠಡಿಯಿತ್ತು. ಅಂದು ಸಂಘದ ಪ್ರಮುಖರಾಗಿ ಹಿರಿಯ ಕಾರ್ಯಕರ್ತ ದಿ.ಸುಬ್ರಾಯ ಶೆಣೈಯವರು ಇದ್ದರು. 52 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ಸಂಘದ ಶಾಖೆಯ ಭಗವಾಧ್ವಜ ಹಾಕಬೇಕೋ? ಬೇಡವೋ ಎಂಬ ವಾದ-ಪ್ರತಿವಾದ ಜೋರಾಗಿತ್ತು. ಹೀಗಿದ್ದರೂ, ಅಂದು ಸಂಘದ ಕಾರ್ಯಚಟುವಟಿಕೆಗಳಿಗೆ ಪೂರ್ಣ ಬೆಂಬಲ-ಸಹಕಾರ ನೀಡಿದವರೇ ವಿಜಯಣ್ಣನವರು (ವಿಜಯರಾಘವ ಪಡ್ವೆಟ್ನಾಯ).

ಜನಸೇವೆಯೇ ಜನಾರ್ದನ ಸೇವೆ. ವೇದವಾಕ್ಯಕ್ಕೆ ಪ್ರೇರಣೆಯೇ ಜನಾರ್ದನ ಸ್ವಾಮಿ. ಸಮಾಜಕ್ಕೆ ಜನಸೇವೆಗೆ ಸ್ವಯಂ ಸೇವಕರನ್ನು ನೀಡಿದ ಕ್ಷೇತ್ರ ಇದಾಗಿತ್ತು. ಆ ಕಾಲದಲ್ಲಿ ಶೇಷಗಿರಿ ಶೆಣೈ ಅವರು ಸೈಕಲ್ನಲ್ಲಿ ತಿರುಗಾಡಿ ಸಂಘದ ಶಾಖೆಯನ್ನು ನಡೆಸುತ್ತಿದ್ದರು. 1983ರಲ್ಲಿ ವಿಶ್ವಹಿಂದೂ ಪರಿಷತ್ನ ದ್ವಿತೀಯ ಪ್ರಾಂತೀಯ ಸಮ್ಮೇಳನ ಸಂದರ್ಭ 4 ತಿಂಗಳುಗಳ ಕಾಲ ಪ್ರಾಂತೀಯ ಬೈಠಕ್ ನಡೆದ ಸ್ಥಳ ಇದಾಗಿತ್ತು. ಅಖಿಲ ಭಾರತ ರಾಷ್ಟ್ರೀಯ ನಾಯಕರು ಭೇಟಿ ನೀಡಿದ ಸ್ಥಳವಿದು. 1983ರಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಂದಿನ ಸರಸಂಘಚಾಲಕ ಬಾಳಾ ಸಾಹೇಬ್, ಹೂವೈ ಶೇಷಾದ್ರಿ, ಸಂಘದ ಸೇವಾ ಪ್ರಮುಖ್ ಅಜಿತ್ ಕುಮಾರ್ ಮತ್ತು ಈಗಿನ ಸಂಘದ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (ಆಗ ಅವರು ಎ.ಬಿ.ಎಪಿ ಜಿಲ್ಲಾ ಜವಾಬ್ದಾರಿಯಲ್ಲಿದ್ದರು) ಇಲ್ಲಿಗೆ ಬಂದಿದ್ದರು.

ವೆಂಕಟರಮಣ ಭಟ್ ಇಳಂತಿಲ ಅವರು ೧೯೬೮ರಲ್ಲಿ ತಾಲೂಕಿನಲ್ಲಿ ಸಂಘದ ಮೊದಲ ಪ್ರಚಾರಕರಾಗಿದ್ದರು. ನಂತರ ನಿರ್ಮಲ್ ಕುಮಾರ್, ದಾಮ ರವೀಂದ್ರ, ಸೀತಾರಾಮ ಕೆದ್ದಿಲ್ಲಾಯ, ದಿನೇಶ್ ಕಾಮತ್ ಕೂಡ ತಾಲೂಕಿನಲ್ಲಿ ಸೇವೆ ಮಾಡಿದ್ದಾರೆ. ಇವರೆಲ್ಲರೂ ಉಜಿರೆ ಜನಾರ್ದನ ದೇವಸ್ಥಾನದ ಆವರಣದಲ್ಲಿ ನಡೆಸಲಾಗುತ್ತಿದ್ದ ಬೈಠಕ್ನಲ್ಲೂ ಭಾಗಿಯಾಗುತ್ತಿದ್ದರು.
ಆಗಿನ ಸಂಘದ ಹಿರಿಯರು, ಪ್ರಾಂತಮಟ್ಟದ ಅಧಿಕಾರಿಗಳು ಭೇಟಿ ನೀಡಿದ ಸ್ಥಳವಿದು. ಹಾಗಾಗಿ ಸ್ವಯಂಸೇವಕರಿಗೆ ಧಾರ್ಮಿಕ ನೆಲೆಯಾಗಿರುವ ಜತೆಗೆ ಜನಸೇವೆ ಮಾಡಲು ಪ್ರೇರೇಪಣೆಯಾದ ಶಕ್ತಿಕೇಂದ್ರವೂ ಈ ದೇವಸ್ಥಾನ ಎನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
ಇಲ್ಲಿ ತಾಲೂಕು ಪ್ರಚಾರಕರಾಗಿ ಕೆಲಸ ಮಾಡಿದ ಜಗದೀಶ ಕಾರಂತ್, ಬೈಂದೂರಿನ ಈಗಿನ ಶಾಸಕ ಗುರುರಾಜ ಗಂಟಿಹೊಳೆ, ಅರವಿಂದ ಬಿಜೂರು, ಗೋವಿಂದ್ ಭಟ್ ಮುಳ್ಳೇರಿಯ, ವಿಶ್ವನಾಥ ಭಿಡೆ, ಗುರುರಾಜರು, ಮೂಲಚಂದ್ರ, ಗಣೇಶ್ ಕುಂದಾಪುರ, ಶ್ರೀಧರ ಕುಂದಾಪುರ ಸಮಾಜದಲ್ಲಿ ತಮ್ಮದೇ ನೆಲೆಯಲ್ಲಿ ಸೇವೆ ಮಾಡುತ್ತಿದ್ದಾರೆ.
ಬರಹ : ಕೆ. ಪದ್ಮನಾಭ ಶೆಟ್ಟಿಗಾರ್
ಶ್ರೀ ರಾಮ ಕೃಪಾ, ಉಜಿರೆ





