ಕಡಬ: ಪ್ರೇಮ ವೈಫಲ್ಯ, ಮದುವೆಗೆ ಹಿಂದೇಟು.. ಇವೆಲ್ಲವನ್ನೂ ಕೇಳಿದ್ದೇವೆ. ಆದರೆ, ಮದುವೆ ನಿಶ್ಚಯವಾಯಿತೆಂದು ಗರ್ಭಿಣಿ ಪ್ರೇಯಸಿಯನ್ನೇ ಬಲಿಕೊಡಲು ಯತ್ನಿಸಿದ ಮಹಾಪಾಪಿ ಪ್ರೇಮಿಯೊಬ್ಬನ ಕರಾಳ ಮುಖ ಕಡಬದಲ್ಲಿ ಬಯಲಾಗಿದೆ.

ಪ್ರೇಯಸಿ ಸತ್ತೇಹೋದಳೆಂದು ಭಾವಿಸಿ ಕಾಡಿನ ಚರಂಡಿಗೆ ಎಸೆದು ಪರಾರಿಯಾಗಿದ್ದ ಕಾಮುಕ ಈಗ ಕಟಕಟೆಯಲ್ಲಿದ್ದಾನೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಕಡಬ ತಾಲೂಕಿನ ಕೊಣಾಜೆ ಗ್ರಾಮದ ಯುವಕ ಹಾಗೂ ಕೊಂಬಾರು ಗ್ರಾಮದ ಯುವತಿಯ ನಡುವೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ನವೆಂಬರ್ 4ರ ಸಂಜೆ ಇಬ್ಬರೂ ಬಿಸಿಲೆ ಘಾಟಿಗೆ ತೆರಳಿದ್ದರು. ಈ ವೇಳೆ ಯುವಕ ಯುವತಿಯ ಮೇಲೆ ಹಲ್ಲೆ ನಡೆಸಿ. ಆಕೆ ಪ್ರಜ್ಞೆ ತಪ್ಪಿದ ಬಳಿಕ ಮೃತಪಟ್ಟಿದ್ದಾಳೆಂದು ಭಾವಿಸಿ ಕಾಡಿನ ಮಧ್ಯೆ ಇರುವ ಚರಂಡಿಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಯುವತಿ ರಾತ್ರಿಯಿಡೀ ಕಾಡಿನ ನಡುವೆ ಚರಂಡಿಯಲ್ಲೇ ಕಳೆದಿದ್ದಾಳೆ. ಮರುದಿನ ಬೆಳಗ್ಗೆ ಅಲ್ಲಿಂದ ಹೊರಬಂದ ಯುವತಿ ಬಸ್ ಮೂಲಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು, ಆರೋಪಿ ಪ್ರಸಾದ್ ಎಂಬಾತನನ್ನು ನವೆಂಬರ್ 5ರಂದು ಸುಬ್ರಹ್ಮಣ್ಯದಲ್ಲಿನ ಆತ ಕೆಲಸ ಮಾಡುತ್ತಿದ್ದ ವಸತಿಗೃಹದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ಯಸಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಆರೋಪಿ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯುವತಿಯೂ ಸುಬ್ರಹ್ಮಣ್ಯದಲ್ಲಿ ಖಾಸಗಿ ಉದ್ಯೋಗದಲ್ಲಿದ್ದಳು ಎನ್ನಲಾಗಿದ್ದು. ಆಕೆಯನ್ನು ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





