ಬೆಳ್ತಂಗಡಿ: ಈಜಲು ಹೋದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಕ್ಕಿ ಅಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದಲ್ಲಿ ಸಂಭವಿಸಿದೆ. ಕುವೆಟ್ಟು ಗ್ರಾಮದ ಸುಣ್ಣತ್ಕೆರೆ ನಿವಾಸಿ ಇರ್ಫಾನ್ (19) ಮೃತಪಟ್ಟ ದುರ್ದೈವಿ.

ಇಂದು (ಮಾರ್ಚ್ 21) ಸಂಜೆ ಸುಮಾರು 4 ಗಂಟೆಯ ವೇಳೆಗೆ ಇರ್ಫಾನ್ ಕರಂಬಾರು ಗ್ರಾಮದ ಕೇಳ್ಕರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಹರಿಯುವ ನದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತ ಹೆಚ್ಚಿದ್ದರಿಂದ ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿದ್ದಾರೆ.


ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕೂಡಲೇ ಸ್ಥಳೀಯ ಯುವಕರು ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ನೀರಿನಿಂದ ಹೊರತೆಗೆದಿದ್ದಾರೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದ ಇರ್ಫಾನ್ನನ್ನು ಚಿಕಿತ್ಸೆಗಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇರ್ಫಾನ್ ಕೊನೆಯುಸಿರೆಳೆದಿದ್ದಾರೆ.


ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








