ಉಜಿರೆ: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ವಿಜಯ ಗೋಪುರ ಲೋಕಾರ್ಪಣೆಯ ಸಂಭ್ರಮ ನಾಡಿನಾದ್ಯಂತ ಸದ್ದು ಮಾಡಿತ್ತು. ಈ ಐತಿಹಾಸಿಕ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಶಕ್ತಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಮಾಚ್ 21ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ‘ಧನ್ಯೋಸ್ಮಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳ ಯಶಸ್ಸಿಗೆ ಸಾವಿರಾರು ಕೈಗಳು ಒಂದಾಗಿದ್ದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ವಹಿಸಿದ್ದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ಕೃಷ್ಣ ಪಡ್ವೆಟ್ನಾಯ ಅವರು ಮಾತನಾಡಿ, ಸ್ವಯಂಸೇವಕರ ನಿಸ್ವಾರ್ಥ ಸೇವೆಯೇ ಈ ಕಾರ್ಯಕ್ರಮದ ಬೆನ್ನೆಲುಬು ಎಂದು ಶ್ಲಾಘಿಸಿದರು.


ವಿಜಯ ಗೋಪುರ ನಿರ್ಮಾಣ ಸಮಿತಿಯ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಬರೋಡ, ಶಾಸಕ ಹರೀಶ್ ಪೂಂಜ ಉಜಿರೆ ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಬ್ರಹ್ಮಕಲಶೋತ್ಸವ ಸಮಿತಿ ಮತ್ತು ರಾಜ ಗೋಪುರ ನಿರ್ಮಾಣ ಸಮಿತಿಯ ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಕಾರ್ಯದರ್ಶಿ ಭರತ್ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ, ಮಹಿಳಾ ಸಮಿತಿಯ ಸಂಚಾಲಕಿ ವನಿತಾ ವಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಪಾಕತಜ್ಞ ರವಿ ಭಟ್, ಶಾಂತ ಭಟ್ ದಂಪತಿಯನ್ನು ಗೌರವಿಸಲಾಯಿತು
ಉಜಿರೆ ಯಾದವ ಆರ್ಟ್ಸ್ ನ ಯಾದವ ರವರು ರಚಿಸಿದ ಜನಾರ್ದನ ದೇವರ ದೊಡ್ಡ ಫೋಟೋ ಹಸ್ತಾಂತರಿಸಿದರು.

ಎಲ್ಲಾ ಸ್ವಯಂ ಸೇವಕರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಆಹಾರ ಸಮಿತಿ ಸಂಚಾಲಕ ಅರುಣ್ ಕುಮಾರ್ ಎಂ ಎಸ್ ಅನಿಸಿಕೆ ವ್ಯಕ್ತಪಡಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿದರು. ಉಪನ್ಯಾಸಕ ಶ್ರೀಧರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಜಗೋಪುರ ನಿರ್ಮಾಣ ಸಮಿತಿಯ ಸಹ ಕೋಶಾಧಿಕಾರಿ ಸಂಜೀವ ಶೆಟ್ಟಿ ಕುಂಟಿನಿ ವಂದಿಸಿದರು. ವಿವಿಧ ಉಪ ಸಮಿತಿಗಳ ಸಂಚಾಲಕರು, ಸದಸ್ಯರು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.






