ಬೆಳ್ತಂಗಡಿ : ಕಳೆದ ತಿಂಗಳಷ್ಟೇ ವಿವಾಹವಾಗಿದ್ದ ಯುವ ಉದ್ಯಮಿಯೊಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಉದ್ಯಮಿ ಸುದೀಪ್ ರೈ ಅವರ ಜೀವನ ಪಯಣ ಈಗ ಅಂತ್ಯಗೊಂಡಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ವಾಸವಾಗಿದ್ದ, ಮೂಲತಃ ಪುತ್ತೂರು ನೆಲ್ಯಾಡಿಯ ನಿವಾಸಿ ಬಿ. ಸುದೀಪ್ ರೈ (36) ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರಹಸ್ಯ ವಿವಾಹದ ಹಿನ್ನೆಲೆ:
ಮಾಹಿತಿಗಳ ಪ್ರಕಾರ, ಸುದೀಪ್ ರೈ ಅವರು ಕಳೆದ ಫೆಬ್ರವರಿ 17 ರಂದು ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ ಎಂಬವರನ್ನು ಮನೆಯವರಿಗೆ ತಿಳಿಸದೆ ಪುತ್ತೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿ ವಿವಾಹವಾಗಿದ್ದರು. ಮದುವೆಯಾದ ಕೇವಲ ಒಂದೇ ತಿಂಗಳ ಅಂತರದಲ್ಲಿ ಇಂತಹದೊಂದು ಕಠಿಣ ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯಿಂದ ಕಾರಣ ಬಯಲಾಗಬೇಕಿದೆ.

ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿಯ ತಂದೆ ದಾಮೋದರ ರೈ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








