ಬೆಳ್ತಂಗಡಿ: ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಕೃಷಿ ನಾಶಪಡಿಸಿದ್ದನ್ನು ಪ್ರಶ್ನಿಸಿದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬಲ್ಲಿ ನಡೆದಿದೆ. ಈ ಪ್ರಕರಣದ ಬೆನ್ನಲ್ಲೇ ಸಂತ್ರಸ್ತೆಯಿಂದ ವಕೀಲೆಯೊಬ್ಬರು ಹಣ ವಸೂಲಿ ಮಾಡಿದ್ದಾರೆ ಎಂಬ ಆಘಾತಕಾರಿ ಅಂಶವೂ ಬೆಳಕಿಗೆ ಬಂದಿದೆ.

ಗರ್ಡಾಡಿ ಗ್ರಾಮದ ನಿವಾಸಿ ಸುಮಾ ಎಂಬುವವರಿಗೆ ಸೇರಿದ ಜಾಗಕ್ಕೆ ಕಳೆದ ಮಾರ್ಚ್ 28ರಂದು ಆರೋಪಿಗಳಾದ ಚೇತನಾ, ಅವರ ಸಹೋದರರು ಮತ್ತು ತಂದೆ ಹಾಗೂ ತಾರನಾಥ ಎಂಬುವವರು ಅಕ್ರಮವಾಗಿ ಪ್ರವೇಶಿಸಿದ್ದರು ಎನ್ನಲಾಗಿದೆ. ಅಲ್ಲಿನ ಅಡಿಕೆ ಗಿಡಗಳನ್ನು ನಾಶಪಡಿಸಲು ಮುಂದಾದಾಗ ಸುಮಾ ಅವರು ಅದನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಸುಮಾ ಅವರ ಮೇಲೆ ಹಲ್ಲೆ ನಡೆಸಿ, ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ ನೀನು ದೂರು ಕೊಟ್ಟರೆ ನಿನ್ನ ಹಾಗೂ ನಿನ್ನ ಮಗನನ್ನು ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಭಯಭೀತರಾಗಿ ಸುಮಾ ಅವರು ಯಾವುದೇ ದೂರು ನೀಡಿಲ್ಲ. ಆದರೆ ದಿನಾಂಕ: 01.04.2026 ರಂದು ಅವರ ವಿರುದ್ಧ ನೀಡಿರುವ ದೂರಿನ ವಿಚಾರಣೆಗೆ ಠಾಣೆಗೆ ಬಂದಾಗ ದೂರುದಾರರ ಪರ ವಕೀಲೆ ಟೆಸ್ಮಿ, ಅವರು ಸುಮಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ದೂರುದಾರರಿಗೆ 50 ಸಾವಿರ ರೂಪಾ. ನೀಡುವಂತೆ ತಾಕೀತು ಮಾಡಿದ್ದಾರಂತೆ .


ಅದರಂತೆ ಸುಮಾ ಅವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಕರಿಮಣಿ ಸರವನ್ನು ಅಡವಿಟ್ಟು ವಕೀಲೆಗೆ 50 ಸಾವಿರ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳ್ತಂಗಡಿ ಠಾಣೆಯಲ್ಲಿ ಸುಮಾ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.





