
ಉಡುಪಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಮನೆಯ ಮೇಲ್ಮಹಡಿಯ ಕೋಣೆಯಲ್ಲಿ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೂಸಕಡಿ ಹಾಲಂಬೇರು ಎಂಬಲ್ಲಿ ಸಂಭವಿಸಿದೆ.

ಮೃತ ಯುವತಿಯನ್ನು ಭಾಗ್ಯಶ್ರೀ ಗಾಣಿಗ (23) ಎಂದು ಗುರುತಿಸಲಾಗಿದೆ. ಈಕೆ ಗುಡ್ಡೆಅಂಗಡಿಯ ಇಂಟರ್ಲಾಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

ಎಂದಿನಂತೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯವರೊಂದಿಗೆ ಊಟ ಮುಗಿಸಿದ್ದ ಭಾಗ್ಯಶ್ರೀ, ನಂತರ ಮಲಗಲು ಮೇಲ್ಮಹಡಿಯ ತಮ್ಮ ಕೋಣೆಗೆ ತೆರಳಿದ್ದರು. ಸುಮಾರು 10.15ರ ಸುಮಾರಿಗೆ ಅಕ್ಕ ಜಯಶ್ರೀ ಅವರು ಹಾಲು ನೀಡಲು ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಕೆಳಗಿಳಿಸಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.


ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರ ಅಕ್ಕ ಜಯಶ್ರೀ ನೀಡಿದ ದೂರಿನ ಮೇರೆಗೆ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





