ಪಾಂಗಾಳ: “ಪುಟ್ಟ ಕಂದಮ್ಮಗಳಿಗೆ ಕನ್ನಡ ಕಲಿಸಿ, ಹೂವಿನ ಬಳ್ಳಿಯಂತೆ ಬೆಳೆಸಿ, ಗೊಬ್ಬರ-ನೀರೆಲ್ಲವನ್ನೂ ಉಣಿಸಿ ಹೂ, ಕಾಯಿ, ಹಣ್ಣುಗಳಿಂದ ಫಲಭರಿತವಾಗುವಂತೆ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು,” ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಹಾಗೂ ಸಮಾಜ ಸೇವಕಿ ಗೀತಾಂಜಲಿ ಎಂ. ಸುವರ್ಣ ಹೇಳಿದರು.


ಅವರು ಪಾಂಗಾಳ ಅಂಗನವಾಡಿ ಕೇಂದ್ರ-2ರಲ್ಲಿ ಆಯೋಜಿಸಲಾಗಿದ್ದ ಸಮಗ್ರ ಬಾಲ ವಿಕಾಸ ಸಮಿತಿಯ ಸಭೆಯನ್ನು ಉದ್ಘಾಟಿಸಿ, ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ಹಾಗೂ ತಿಂಡಿ-ತಿನಿಸುಗಳನ್ನು ವಿತರಿಸಿ ಮಾತನಾಡಿದರು.

ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ಸಾನಿಧ್ಯದಿಂದ ಪಾಂಗಾಳ ಅಂಗನವಾಡಿ ಮಕ್ಕಳಿಗೆ ಲಭಿಸಿದ ಈ ನೆರವನ್ನು ಹಸ್ತಾಂತರಿಸಿದ ಅವರು, “ಕರ್ನಾಟಕದಲ್ಲಿ ಸಾಧನೆ ಮಾಡಿದ ಅನೇಕ ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳ ಶಿಕ್ಷಣ, ನಡತೆ ಮತ್ತು ಆರೋಗ್ಯದ ಬಗ್ಗೆ ಹೆತ್ತವರು ಹಾಗೂ ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು,” ಎಂದು ವಿನಂತಿಸಿಕೊಂಡರು.
ವಿವಿಧ ಪರಿಕರಗಳ ಕೊಡುಗೆ:
ಶ್ರೀ ಕ್ಷೇತ್ರ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥರಾದ ತುಕಾರಾಮ್ ಎಸ್. ಉರ್ವ, ಸಂಗಮ ಫ್ರೆಂಡ್ಸ್ ಕಟಪಾಡಿ ಮತ್ತು ಸಾಯಿ ಫ್ರೆಂಡ್ಸ್ ಕಟಪಾಡಿಯ ಕಿಶನ್, ಜಯಕರ್ ಹಾಗೂ ರಂಜಿತ್ ಕೋಟ್ಯಾನ್ ಅವರ ಸೌಜನ್ಯದೊಂದಿಗೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಸ್ಕೂಲ್ ಬ್ಯಾಗ್, ಆಟಿಕೆ ಗೊಂಬೆಗಳು ಮತ್ತು ಡ್ರಾಯಿಂಗ್ ಸ್ಲೇಟ್ಗಳನ್ನು ಕೊಡುಗೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖರ ಉಪಸ್ಥಿತಿ:
ಈ ಸಂದರ್ಭದಲ್ಲಿ ಸಂಗಮ ಫ್ರೆಂಡ್ಸ್ನ ರಂಜಿತ್ ಕೋಟ್ಯಾನ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶಾಲಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಲೋಚನಾ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಎ., ಸಿಎಚ್ಒ ಶಾಲಿನಿ, ಬಾಲ ವಿಕಾಸ ಸಮಿತಿಯ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಗೀತಾ ಪಾಂಗಾಳ ಸ್ವಾಗತಿಸಿದರು. ಕೊನೆಯಲ್ಲಿ ಅಂಗನವಾಡಿ ಶಿಕ್ಷಕಿ ವಂದನಾರ್ಪಣೆ ಮಾಡಿದರು.






