
ಬೆಳ್ತಂಗಡಿ: ಕೂಪನ್ಗಾಗಿ ವ್ಯಕ್ತಿಯೊಬ್ಬನ ಪ್ರಾಣವೇ ಹೋಗಿದೆ! ಕೇರಳದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಮಾಲಕನನ್ನು ಬೆಳ್ತಂಗಡಿಯ ಯುವಕನೊಬ್ಬ ಕತ್ತಿಯಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಮಂದಿ ಬಿರಿಯಾನಿ ಸ್ಪೆಷಲಿಸ್ಟ್ ಇರ್ಷಾದ್ ಮಾಡಿದ ಈ ಕೃತ್ಯದ ಹಿಂದಿನ ಅಸಲಿ ಕಾರಣ ಕೇಳಿದರೆ ನೀವು ಬೆಚ್ಚಿಬೀಳುತ್ತೀರಿ!”

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಪೆರ್ದಾಡಿ ನಿವಾಸಿ, 30 ವರ್ಷದ ಇರ್ಷಾದ್ ಕೇರಳದ ಚಡಯಮಂಗಳದಲ್ಲಿರುವ ‘ಸೈಸಿ’ ಎಂಬ ಹೊಟೇಲ್ನಲ್ಲಿ ಬಿರಿಯಾನಿ ಪಾಕತಜ್ಞನಾಗಿ ಕೆಲಸ ಮಾಡುತ್ತಿದ್ದ. ಹೊಟೇಲ್ ಮಾಲಕ ಶಕೀರ್ ಹುಸೈನ್ ಈತನನ್ನು ನಂಬಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ, ಹೊಟೇಲ್ಗೆ ಬರುವ ಅಕ್ಕಿ ಮೂಟೆಗಳಲ್ಲಿದ್ದ 50, 100 ಮತ್ತು 150 ರೂಪಾಯಿಗಳ ರಿಯಾಯಿತಿ ಕೂಪನ್ಗಳೇ ಇಬ್ಬರ ನಡುವಿನ ಜಗಳಕ್ಕೆ ಮೂಲವಾಯಿತು.

ಅಕ್ಕಿ ಮೂಟೆಯ ಕೂಪನ್ಗಳನ್ನು ಮಾಲಕರಿಗೆ ನೀಡಬೇಕೆಂದು ಶಕೀರ್ ಹುಸೈನ್ ಸೂಚಿಸಿದ್ದರು. ಆದರೆ ಇರ್ಷಾದ್ ಅವುಗಳನ್ನು ಕದ್ದು ತನ್ನಲ್ಲೇ ಇರಿಸಿಕೊಂಡಿದ್ದ. ಈ ಬಗ್ಗೆ ಪ್ರಶ್ನಿಸಲು ಮಾಲಕರು ಇರ್ಷಾದ್ ವಾಸವಿದ್ದ ಎರಡನೇ ಮಹಡಿಗೆ ತೆರಳಿದಾಗ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಆಕ್ರೋಶಗೊಂಡ ಇರ್ಷಾದ್, ಚಾಕುವಿನಿಂದ ಶಕೀರ್ ಅವರ ಎದೆಗೆ ಬಲವಾಗಿ ಚುಚ್ಚಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಮಾಲಕ ಶಕೀರ್ ಬದುಕುಳಿಯಲಿಲ್ಲ.

ಕೊಲೆ ಮಾಡಿದ ಬೆನ್ನಲ್ಲೇ ಇರ್ಷಾದ್ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆಗಲು ಪ್ಲಾನ್ ಮಾಡಿದ್ದ. ಕೂಡಲೇ ತನ್ನ ಬಟ್ಟೆ ಬದಲಿಸಿ, ಅದೇ ಹೊಟೇಲ್ನ ಡೆಲಿವರಿ ಬಾಯ್ ಸ್ಕೂಟರ್ ಏರಿ ಅಲ್ಲಿಂದ ಕಾಲ್ಕಿತ್ತಿದ್ದ. ಯಾರಿಗೂ ಸಂಶಯ ಬಾರದಂತೆ ಸ್ಕೂಟರ್ನಲ್ಲಿ ತೆರಳಿ ಬಳಿಕ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಹತ್ತಿ ನಾಪತ್ತೆಯಾಗಲು ಯತ್ನಿಸಿದ್ದ.

ಅಲ್ಲಿಂದ ತಪ್ಪಿಸಿಕೊಂಡ ಆತನ ಹುಡುಕಾಟಕ್ಕೆ ಪೊಲೀಸರು ತಕ್ಷಣ ಬಲೆ ಬೀಸಿ ಕಾರ್ಯಾಚರಣೆಗಿಳಿದಿದ್ದಾರೆ. ಚಡಯಮಂಗಳ ಮತ್ತು ಮನ್ನಾಂದಲ ಪೊಲೀಸರು ಊರವರ ಸಹಕಾರದೊಂದಿದೆ ವ್ಯೂಹ ರಚಿಸಿ ಪತ್ತೆ ಕಾರ್ಯ ಕೈಗೊಂಡಿದ್ದು ಈ ವೇಳೆ ಆರೋಪಿಯು ಕೆಎಸ್ಆರ್ಟಿಸಿ ಬಸ್ಸು ಹತ್ತಿ ಪರಾರಿಯಾಗಲು ಯತ್ನಿಸಿದ್ದ. ಅಲ್ಲಿಂದ ಆತನನ್ನು ಬಂಧಿಸಿ ಕೊಲ್ಲಂ ಜೈಲಿಗಟ್ಟಲಾಗಿದೆ.





