ಬೆಳ್ತಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಹೋಟೆಲ್ ಒಂದರ ಕೆಲಸಗಾರ ಶೌಚಾಲಯಕ್ಕೆ ಹೋದವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ರೇಖ್ಯಾ ಗ್ರಾಮದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಹರಿಶಂಕರ್ (52) ಮೃತಪಟ್ಟ ವ್ಯಕ್ತಿ. ಇವರು ರೇಖ್ಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿರುವ ಮಲ್ನಾಡ್ ಹೋಟೆಲ್ ನಲ್ಲಿ ಕಳೆದ ಕೆಲವು ಸಮಯದಿಂದ ಕೆಲಸಕ್ಕಿದ್ದರು.
ಏ.18 ರಂದು ಸಂಜೆ ಹರಿಶಂಕರ್ ಅವರು ಹೋಟೆಲ್ನ ಶೌಚಾಲಯಕ್ಕೆ ತೆರಳಿದ್ದರು. ದೀರ್ಘಕಾಲದವರೆಗೆ ಅವರು ವಾಪಸ್ ಬಾರದೇ ಇದ್ದಾಗ ಅನುಮಾನಗೊಂಡ ಹೋಟೆಲ್ನ ಇತರ ಸಿಬ್ಬಂದಿ ಹಾಗೂ ಮಾಲೀಕರು ಹೋಗಿ ನೋಡಿದ್ದಾರೆ. ಶೌಚಾಲಯದ ಒಳಗೆ ಹರಿಶಂಕರ್ ಅವರು ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣವೇ ಅವರನ್ನು ಪರೀಕ್ಷಿಸಿದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವು ಆಕಸ್ಮಿಕವೇ ಅಥವಾ ಅನಾರೋಗ್ಯದ ಕಾರಣದಿಂದ ಸಂಭವಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.







