ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿಯನ್ನು ಏಪ್ರಿಲ್ 16ರಂದು ಆರೋಪಿಗಳು ಪುಸಲಾಯಿಸಿ ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಬಾಲಕಿಯು ಮನೆಯವರಿಗೆ ಮಾಹಿತಿ ನೀಡಿದ್ದು, ಪೋಷಕರು ಏಪ್ರಿಲ್ 17ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ತಂಡ ಪ್ರಕರಣದಲ್ಲಿ ಭಾಗಿಯಾದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಸುಮಂತ್(28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್(26) ನನ್ನು ಏ.18 ರಂದು ಸಂಜೆ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮದುವೆ ಸಂಭ್ರಮದಲ್ಲಿದ್ದ ಆರೋಪಿ ಈಗ ಕಂಬಿ ಹಿಂದೆ!
ವಿಶೇಷವೆಂದರೆ, ಪ್ರಕರಣದ ಮೊದಲ ಆರೋಪಿ ಸುಮಂತ್ಗೆ ಬರುವ ಮೇ. 10ರಂದು ಮದುವೆ ನಿಗದಿಯಾಗಿತ್ತು. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ನವ ವರ, ಈಗ ಅತ್ಯಾಚಾರದಂತಹ ಹೇಯ ಕೃತ್ಯ ಎಸಗಿ ಜೈಲು ಪಾಲಾಗಿದ್ದಾನೆ.







