ಭೋಪಾಲ್ : ಸಾಮಾನ್ಯವಾಗಿ ನಿಧನ ಹೊಂದಿದ ಬಳಿಕ ವ್ಯಕ್ತಿಯ ಸಂಬಂಧಿಗಳು ಉತ್ತರಕ್ರಿಯೆ ನೆರವೇರಿಸಿ ಸಾಮೂಹಿಕ ಭೋಜನವನ್ನು ಹಾಕಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಬದುಕಿರುವಾಗಲೇ ತನ್ನ ಉತ್ತರಕ್ರಿಯೆಯನ್ನು ನಡೆಸಿದ್ದು, ಊರ ಜನರಿಗೆ ಊಟ ಹಾಕಿಸಿದ್ದಾನೆ.!
ತನ್ನ ಸಾವಿನ ನಂತರ ತನಗೆ ಅಂತಿಮ ಸಂಸ್ಕಾರ ಹಾಗೂ ಉತ್ತರಕ್ರಿಯೆಗಳನ್ನು ಮಾಡಲು ಯಾರೂ ಇಲ್ಲ ಎಂಬ ಆತಂಕದಲ್ಲಿದ್ದ 60 ವರ್ಷದ ಅವಿವಾಹಿತ ವೃದ್ಧನೊಬ್ಬ, ತಾನು ಬದುಕಿರುವಾಗಲೇ ತಮ್ಮದೇ ಶ್ರಾದ್ಧದ ಧಾರ್ಮಿಕ ವಿಧಿವಿಧಾನಗಳು ಹಾಗೂ ಸಾಮೂಹಿಕ ಭೋಜನವನ್ನು) ಏರ್ಪಡಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಶಿವಪುರಿ ಜಿಲ್ಲೆಯ ಕರೇರಾ ವ್ಯಾಪ್ತಿಯ ಹಾಜಿನಗರ ಎಂಬ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಕಲ್ಯಾಣ್ ಪಾಲ್ ಎಂಬುವವರೇ ಈ ಕಾರ್ಯ ಮಾಡಿದ ವೃದ್ಧ. ಇವರು ಸದ್ಯ ಒಂಟಿಯಾಗಿ ವಾಸಿಸುತ್ತಿದ್ದು, ಇವರಿಗೆ ಹತ್ತಿರದ ಸಂಬಂಧಿಕರು ಯಾರೂ ಇಲ್ಲ. ಈ ಹಿನ್ನೆಲೆಯಲ್ಲಿ, ಸಾಮಾನ್ಯವಾಗಿ ವ್ಯಕ್ತಿಯೊಬ್ಬರು ಮರಣ ಹೊಂದಿದ ನಂತರ ಮಾಡುವ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇವರೇ ಖುದ್ದಾಗಿ ನಿಂತು ಮಾಡಿಕೊಂಡಿದ್ದಾರೆ.
ಪ್ರಯಾಗ್ರಾಜ್ನಲ್ಲಿ ಅಸ್ಥಿ ವಿಸರ್ಜನೆ ಮಾದರಿ ಪೂಜೆ:
ಗ್ರಾಮಸ್ಥರು ನೀಡಿರುವ ಮಾಹಿತಿ ಪ್ರಕಾರ, ಕಲ್ಯಾಣ್ ಪಾಲ್ ಅವರು ಈ ಕಾರ್ಯಕ್ರಮಕ್ಕೂ ಎರಡು ದಿನಗಳ ಮುಂಚಿತವಾಗಿ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ (ಅಲಹಾಬಾದ್) ತೆರಳಿದ್ದರು. ಅಲ್ಲಿ ತಮ್ಮದೇ ಹೆಸರಿನಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಮರಣದ ನಂತರ ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜಿಸಿದ ಬಳಿಕ ಮಾಡುವ ಆಚರಣೆಯಂತೆಯೇ ಇವರು ಈ ಕಾರ್ಯ ಮುಗಿಸಿ ಬಂದಿದ್ದಾರೆ.
ಗ್ರಾಮಕ್ಕೆ ಮರಳಿದ ನಂತರ, ತಮ್ಮ ಮನೆಯಲ್ಲಿ 24 ಗಂಟೆಗಳ ಕಾಲ ನಿರಂತರ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ತದನಂತರ ಶನಿವಾರದಂದು ಬೃಹತ್ ಮಟ್ಟದ ಸಾಮೂಹಿಕ ಭೋಜನವನ್ನು ಆಯೋಜಿಸಿದ್ದರು. ಸುತ್ತಮುತ್ತಲಿನ ಹಳ್ಳಿಗಳ ಸುಮಾರು 6 ರಿಂದ 7 ಸಾವಿರ ಜನ ಪಾಲ್ಗೊಂಡು ಊಟ ಸವಿದಿದ್ದಾರೆ.
ಸಾಂಪ್ರದಾಯಿಕವಾಗಿ ಸಾವಿನ ನಂತರ ಮಾಡುವ ಭೋಜನಕೂಟದಂತೆಯೇ ಇಡೀ ಕಾರ್ಯಕ್ರಮ ಇತ್ತು. ಆದರೆ ವ್ಯತ್ಯಾಸವೆಂದರೆ, ಯಾರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತೋ ಆ ವ್ಯಕ್ತಿ (ಕಲ್ಯಾಣ್ ಪಾಲ್) ಸ್ವತಃ ಜೀವಂತವಾಗಿದ್ದುಕೊಂಡು ಬಂದ ಅತಿಥಿಗಳನ್ನು ಕೈಮುಗಿದು ಸ್ವಾಗತಿಸುತ್ತಿದ್ದರು!
ಒಬ್ಬನೇ ಮಗ, ಮದುವೆಯೂ ಆಗಿರಲಿಲ್ಲ
“ಕಲ್ಯಾಣ್ ಪಾಲ್ ಅವರು ತಮ್ಮ ಹೆತ್ತವರಿಗೆ ಒಬ್ಬನೇ ಮಗ. ಅವರು ಮದುವೆಯನ್ನೂ ಮಾಡಿಕೊಂಡಿರಲಿಲ್ಲ. ಹೀಗಾಗಿ ತಾನು ತೀರಿಕೊಂಡ ಮೇಲೆ ತನಗೆ ಮುಕ್ತಿ ಸಿಗುವಂತೆ ಅಂತಿಮ ಸಂಸ್ಕಾರ ಮಾಡಲು ಅಥವಾ ಶ್ರಾದ್ಧ ಕರ್ಮಗಳನ್ನು ಮಾಡಲು ಯಾರೂ ಇಲ್ಲವಲ್ಲ ಎಂಬ ಆತಂಕ ಅವರನ್ನು ಕಾಡುತ್ತಿತ್ತು” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
“ಈಗ ನನ್ನ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ನನ್ನ ಕೊನೆಯ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ವಿಧಿವಿಧಾನಗಳನ್ನು ನಾನು ಬದುಕಿರುವಾಗಲೇ ಪೂರ್ಣಗೊಳಿಸಿದ್ದೇನೆ. ಇನ್ನು ಮುಂದೆ ಸಾವು ಯಾವಾಗ ಬಂದರೂ ನಾನು ಶಾಂತಿಯಿಂದ ಕಣ್ಣು ಮುಚ್ಚುತ್ತೇನೆ. ಏಕೆಂದರೆ ನನ್ನ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಹೇಗೆ ನಡೆಯುತ್ತವೆ ಎಂಬುದನ್ನು ನಾನೇ ನನ್ನ ಕಣ್ಣಾರೆ ಕಂಡು ಧನ್ಯನಾಗಿದ್ದೇನೆ,” ಎಂದಿದ್ದಾರೆ.







