ಧರ್ಮಸ್ಥಳ: ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ “ಬುರುಡೆ ಗ್ಯಾಂಗ್” ಮಾನವನ ತಲೆಬುರುಡೆ ತೆಗೆದು ವಿಡಿಯೋ ಮಾಡಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ತೀವ್ರಗೊಳಿಸಿರುವ ಎಸ್ಐಟಿ (SIT) ಅಧಿಕಾರಿಗಳು ಇಂದು (ಮೇ 21) ಘಟನಾ ಸ್ಥಳದಲ್ಲಿ ಹಠಾತ್ ಜಂಟಿ ಕಾರ್ಯಾಚರಣೆ ಹಾಗೂ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ.
ಬೆಂಗಳೂರಿನಿಂದ ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯ (FSL) ತಜ್ಞರು ಹಾಗೂ ಸೋಕೋ (SOCO) ತಂಡದ ಜೊತೆಗೂಡಿ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿ ಸಮೀಪದ ಬಂಗ್ಲೆಗುಡ್ಡೆಯಲ್ಲಿ ಮರು ಸೃಷ್ಟಿ (Re-creation) ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಸೌಜನ್ಯ ಅವರ ಮಾವ ವಿಠಲ್ ಗೌಡ ಮತ್ತು ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್ ಎಂಬುವವರು ಮಾನವನ ತಲೆಬುರುಡೆಯನ್ನು ಹೊರತೆಗೆದಿದ್ದರು. ಬಳಿಕ ಆ ಸ್ಥಳದಲ್ಲೇ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು.
ಮಧ್ಯಾಹ್ನ 2:40ಕ್ಕೆ ಸ್ಥಳಕ್ಕೆ ಬಂದ ಅಧಿಕಾರಿಗಳು
ಘಟನಾ ಸ್ಥಳವನ್ನು ಅಧಿಕೃತವಾಗಿ ಖಚಿತಪಡಿಸಿಕೊಂಡು ಎಸ್ಐಟಿಗೆ ವರದಿ ನೀಡಲು ಬೆಂಗಳೂರಿನ ಎಫ್ಎಸ್ಎಲ್ ತಜ್ಞರ ತಂಡ ಧರ್ಮಸ್ಥಳಕ್ಕೆ ಆಗಮಿಸಿದೆ. ಮೇ 21ರಂದು ಮಧ್ಯಾಹ್ನ ನಿಖರವಾಗಿ 2:40 ಕ್ಕೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪ್ರದೀಪ್ ಕುಲಾಲ್ನನ್ನು ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಬಂಗ್ಲೆಗುಡ್ಡೆಗೆ ಕರೆತಂದಿದ್ದಾರೆ.







