ಉಡುಪಿ: ತುಳುಕೂಟ ಉಡುಪಿ (ರಿ.) ಮತ್ತು ವಿಶ್ವಪ್ರಭ ಪ್ರತಿಷ್ಠಾನ ಜಂಟಿ ಸಹಯೋಗದಲ್ಲಿ ಮಧುಶ್ರೀ ಪ್ರಕಾಶನ ಕಿದಿಯೂರು ಇದರ ವತಿಯಿಂದ ಮಧುಶ್ರೀ ಪ್ರಕಾಶನದ ನಲ್ವತ್ತನೇ ವರ್ಷದ ಸಂಭ್ರಮಕ್ಕೆ ಭಾನುವಾರ ಸಂಜೆ ಉಡುಪಿ ಕಿದಿಯೂರು ಹೋಟೇಲಿನ ಅನಂತಶಯನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.




ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ತುಳುಕೂಟದ ಕಾರ್ಯದರ್ಶಿ, ಸಾಹಿತಿ ಗಂಗಾಧರ್ ಕಿದಿಯೂರು ಅವರು ೪೦ ವರ್ಷಗಳಲ್ಲಿ ಮಧುಶ್ರೀ ಪ್ರಕಾಶನದ ಮೂಲಕ ೪೦ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ವಿವಿಧ ಬರಹಗಾರರನ್ನು ಬೆಳೆಸುವ ಕೆಲಸಮಾಡಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿಯ ಹಿರಿಯ ಉದ್ಯಮಿ ಯು. ವಿಶ್ವನಾಥ ಶೆಣೈ ಅವರು ಭಾಗವಹಿಸಿದ್ದರು. ಇದೇ ಸಂದರ್ಭ ಮೀರ್ಮಾರ್ ಗೋವಾದ ನಿವೃತ್ತ ಉಪಪ್ರಾಂಶುಪಾಲರಾದ ಎಸ್.ಎನ್.ಡಿ. ಪೂಜಾರಿ ಅವರು ಬರೆದಿರುವ ‘ತುಳುವ ದೈವ ಸಂಪ್ರದಾಯ’ ಅಧ್ಯಯನ ಗ್ರಂಥವನ್ನು ಉಡುಪಿ ತುಳುಕೂಟದ ಸ್ಥಾಪಕಾಧ್ಯಕ್ಷ ಡಾ. ಭಾಸ್ಕರಾನಂದ ಕುಮಾರ್ ಬಿಡುಗಡೆ ಮಾಡಿದರು. ಜಾನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್ ಅವರು ಪುಸ್ತಕ ಪರಿಚಯ ಮಾಡಿದರು.
ತುಳುಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಮಧುಶ್ರೀ ಪ್ರಕಾಶನದ ಮುಖ್ಯಸ್ಥ, ಸಾಹಿತಿ ಗಂಗಾಧರ ಕಿದಿಯೂರು ಅವರು ಬರೆದಿರುವ ‘ಪಿಂಗಾರದ ಬಾಲೆ ಸಿರಿ’ ತುಳು ನಾಟಕದ ಕೃತಿಯ ಇಂಗ್ಲಿಷ್ ಆವೃತ್ತಿಯನ್ನು ಜಾನಪದ ವಿದ್ವಾಂಸರಾದ ಡಾ. ಗಣೇಶ್ ಅಮಿನ್ ಸಂಕಮಾರ್ ಅವರು ಬಿಡುಗಡೆ ಮಾಡಿದರು. ಈ ಕೃತಿಯನ್ನು ಎಸ್.ಎನ್.ಡಿ. ಪೂಜಾರಿ ಅವರು ಇಂಗ್ಲೀಷಿಗೆ ಅನುವಾದಿಸಿದ್ದರು. ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ,ಲೇಖಕಿ ಡಾ.ಪಾರ್ವತಿ ಜಿ.ಐತಾಳ್ ಪುಸ್ತಕ ಪರಿಚಯ ಮಾಡಿದರು. ಇದೇ ವೇಳೆ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಎಲ್. ಸಾಮಗ, ನಿವೃತ್ತ ಶಿಕ್ಷಕರಾದ ಸರಳಾ ಶೆಟ್ಟಿ, ಧನಲಕ್ಷ್ಮೀ, ಮುತ್ತಕ್ಕ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು.. ಪ್ರತಿಭಾವಂತ ವಿದ್ಯಾರ್ಥಿಗಳಾದ ತನುಶ್ರೀ ಪಿತ್ರೋಡಿ, ಸಂಹಿತಾ ಜಿ. ಪಿ., ಯಶಸ್ ಪಿ.ಸುವರ್ಣ ಕಟಪಾಡಿ, ಶಾರ್ವರಿ ಯು. ಅಂಚನ್, ಆದ್ಯ ಶ್ರೀನಾಥ್, ಅದಿತಿ ಶ್ರೀನಾಥ್, ಸಮರ್ಥ ಎಂ. ಸಿ, ತನ್ವಿ ಎಂ. ಕಿದಿಯೂರು, ವೈಷ್ಣವಿ ವಿಶ್ವನಾಥ್ ಅವರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಮಧುಶ್ರೀ ಪ್ರಕಾಶನದೊಂದಿಗೆ ಬನ್ನೆಲುಬಾಗಿ ನಿಂತಿರುವ ಸಂಘ ಸಂಸ್ಥೆಗಳಾದ ರಂಗಭೂಮಿ (ರಿ.) ಉಡುಪಿ, ಸುಮನಸಾ ಕೊಡವೂರು, ಕಲಾಕಿರಣ್ ಕ್ಲಬ್ ಬೈಲೂರು, ನವಸುಮ ರಂಗಮಂಚ ಕೊಡವೂರು, ಯೂತ್ ಸ್ಪೋರ್ಟ್ಸ್ ಅಂಡ್ ಕಲ್ಬರಲ್ ಕ್ಲಬ್ ಅಂಬಲಪಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ವಿಠೋಬ ಭಜನಾ ಮಂದಿರ ಅಂಬಲಪಾಡಿ, ತುಳುಕೂಟ ಉಡುಪಿ (ರಿ.) ನಂದಗೋಕುಲ ಯುವಕ ಮಂಡಲ ಮಾರ್ಪಳ್ಳಿ, ಬೈದಶ್ರೀ ಸಂಶೋಧನಾ ಕೇಂದ್ರ ಆದಿ ಉಡುಪಿ ಇವರಿಗೆ ಗೌರವಾರ್ಪಣೆ ನಡೆಯಿತು.
ಮಧುಶ್ರೀ ಪ್ರಕಾಶನದ ಮುಖ್ಯಸ್ಥ ಗಂಗಾಧರ ಕಿದಿಯೂರು ಸ್ವಾಗತಿಸಿದರು. ಪ್ರಭಾಕರ ತುಮುರಿ ಕಾರ್ಯಕ್ರಮ ನಿರೂಪಿಸಿದರು.







