ಉಜಿರೆ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೆಳ್ತಂಗಡಿ ಹಾಗೂ ನವಚೇತನ ಆಂಗ್ಲ ಮಾಧ್ಯಮ ಶಾಲೆ, ವೇಣೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ–2026ರಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.

ಸ್ಪರ್ಧೆಯಲ್ಲಿ ಸೌರವ್ ಯು.ಎನ್., ಮೊಹಮ್ಮದ್ ಶಫೀಕ್ ಅಹಮದ್ ಹಾಗೂ ಸ್ಟೀವನ್ ಲೋಬೊ ಅವರು ಚಿನ್ನದ ಪದಕಗಳನ್ನು ಗೆದ್ದು ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ ಫಾತಿಮಾ ಅಫ್ವಾ, ಅಕ್ಷರ್, ಸುಬಿನ್ ಕೆ.ಟಿ. ಹಾಗೂ ಲಿಖಿತ್ ಟಿ.ಎ. ಅವರು ಬೆಳ್ಳಿಯ ಪದಕಗಳನ್ನು, ಹಾಗೂ ಪೃತ್ವಿಕ್ ಗೌಡ ಎಚ್.ಪಿ. ಅವರು ಕಂಚಿನ ಪದಕವನ್ನು ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.




ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಶಾಲೆಯ ಸಂಚಾಲಕರು, ಪ್ರಾಂಶುಪಾಲರು, ಕರಾಟೆ ತರಬೇತುದಾರರು, ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಮಂಡಳಿಯ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಜಿಲ್ಲಾ ಹಾಗೂ ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರಿಯಲಿ ಎಂದು ಶುಭ ಹಾರೈಸಿದ್ದಾರೆ.






