ಉಡುಪಿ :ಅಪ್ಪ-ಅಮ್ಮನ ಪ್ರೀತಿಯಲ್ಲಿ ಬೆಳೆದು ದೊಡ್ಡವನಾಗಬೇಕಿದ್ದ ಪುಟ್ಟ ಕಂದಮ್ಮ, ತಾಯಿಯ ಕಣ್ಣೆದುರೇ, ಅವಳ ಮಡಿಲಲ್ಲೇ ಪ್ರಾಣ ಬಿಟ್ಟಿರುವ ಧಾರುಣ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ವಿಧಿಯ ಕ್ರೂರ ಆಟಕ್ಕೆ ಒಂದುವರೆ ವರ್ಷದ ಮಗು ಬಲಿಯಾಗಿದ್ದು, ಇಡೀ ಜಿಲ್ಲೆಯನ್ನೇ ಕಣ್ಣೀರಲ್ಲಿ ಮುಳುಗಿಸಿದೆ!.



ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಚಾಂತಾರು ಹೆರಂಜಾಲು ಗ್ರಾಮದಲ್ಲಿ ಈ ಘೋರ ದುರಂತ ಸಂಭವಿಸಿದೆ. ಇಲ್ಲಿನ ನಿವಾಸಿಗಳಾದ ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ 1.5 ವರ್ಷದ ಗಂಡು ಮಗುವೇ ಮೃತಪಟ್ಟ ದುರ್ದೈವಿ. ತಾಯಿ ಸುಚಿತ್ರಾ ಅವರು ಮಗುವನ್ನು ಮಡಿಲಲ್ಲಿ ಇಟ್ಟುಕೊಂಡಿದ್ದಾಗ, ತೆಂಗಿನಮರದಿಂದ ಅಚಾನಕ್ ಆಗಿ ತೆಂಗಿನಕಾಯಿಯೊಂದು ಮಗುವಿನ ತಲೆಯ ಮೇಲೆಯೇ ಬಿದ್ದಿದೆ.

ತೆಂಗಿನಕಾಯಿ ಬಿದ್ದ ತೀವ್ರತೆಗೆ ಮಗುವಿನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ಮತ್ತು ಸ್ಥಳೀಯರು ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಯನ್ನೂ ನಡೆಸಿದ್ರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದೆ.
ಮೃತ ಮಗು ಪ್ರಶಾಂತ್-ಸುಚಿತ್ರಾ ದಂಪತಿಯ ಎರಡನೇ ಪುತ್ರನಾಗಿದ್ದ. ಕಣ್ಣೆದುರೇ ಆಟವಾಡಿಕೊಂಡಿರಬೇಕಾದ ಮಗುವಿನ ಅಕಾಲಿಕ ಮರಣದಿಂದಾಗಿ ಹೆರಂಜಾಲು ಗ್ರಾಮವೇ ಮರುಗಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.







