ಬಂದಾರು: ಬಂದಾರಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕೊಡೆ ವಿತರಣಾ ಕಾರ್ಯಕ್ರಮವು ಜೂನ್ 16 ರಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಈ ಕಾರ್ಯಕ್ರಮವನ್ನು ಯಶೋ ವಿಜಯ (ಬದುಕು-ನೆನಪು-ಸ್ಮರಣೆ) ಹಾಗೂ ಶ್ರೀ ಶಶಿಧರ ಶೆಟ್ಟಿ ಬರೋಡ ಇವರ ಮಾತೃಶ್ರೀಯವರಾದ ದಿ. ಕಾಶಿ ಶೆಟ್ಟಿಯವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿತ್ತು.
ಪ್ರಮುಖ ಸಂಘಟನಾ ಸಂಸ್ಥೆಗಳಾದ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.) ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ.), ಬಿರುವೆರ್ ಕುಡ್ಲ (ರಿ.) ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ಈ ಶ್ಲಾಘನೀಯ ಕಾರ್ಯಕ್ರಮ ಮೂಡಿಬಂದಿದೆ.
ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ನ ಸಂಚಾಲಕರು ಹಾಗೂ ಲಕ್ಷ್ಮೀ ಇಂಡಸ್ಟ್ರೀಸ್ ಮತ್ತು ‘ಕನಸಿನ ಮನೆ’ ಉಜಿರೆಯ ಮಾಲಕರಾದ ಕೆ. ಮೋಹನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಕೊಡೆಗಳನ್ನು ವಿತರಿಸಿ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಇದೇ ಸಂದರ್ಭದಲ್ಲಿ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ, ಬಂದಾರು ಸರಕಾರಿ ಶಾಲೆಯ ವತಿಯಿಂದ ಕೆ. ಮೋಹನ್ ಕುಮಾರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮುಂಜ ಸಿ.ಎ.ಬ್ಯಾಂಕ್ ನ ಉಪಾಧ್ಯಕ್ಷರಾದ ಅಶೋಕ್ ಪಾಂಜಲ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಉಮೇಶ್ , ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವನಾಥ್, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ನವೀನ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಿಮಲ ತಾರಿದಡಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ರಫೀಕ್ ಅವರು ಎಲ್ಲರನ್ನೂ ಸ್ವಾಗತಿಸಿದರೆ, ಮೋಹನ್ ಅವರು ಸಮಗ್ರ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು. ಶಾಲಾ ಶಿಕ್ಷಕಿಯರಾದ ವಿನುತಾ, ಚಂದ್ರಕಲಾ, ರೇಖಾ, ದೀಪಿಕಾ, ಗೀತಾ ಹಾಗೂ ಸುಜಯಿನಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.







