ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯ ಔಷಧಿ ವಿಭಾಗದ ಮುಖ್ಯಸ್ಥ ಚಂದ್ರಶೇಖರ್ ಎಂಬಾತ ತನ್ನದೇ ಆಸ್ಪತ್ರೆಯ ಮಹಿಳಾ ಸಿಬ್ಬಂದಿಗೆ ಕಾಮದ ಕಿರುಕುಳ ನೀಡಿದ್ದಾನೆ ಎಂಬ ಆರೋಪದಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಕರಣ ದಾಖಲಾಗುತ್ತಿದ್ದಂತೆ ಕಾಮುಕ ಚಂದ್ರಶೇಖರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅದಲ್ಲದೆ ಬಂಧನದ ಭೀತಿಯಿಂದ ತನ್ನ ವಕೀಲರ ಮೂಲಕ ಜಾಮೀನು ಅರ್ಜಿ ಮಂಗಳೂರು ಕೋರ್ಟ್ ನಲ್ಲಿ ಸಲ್ಲಿಸಲಾಗಿದೆ.

ಕಳೆದ 25 ವರ್ಷಗಳಿಂದ ಒಂದೇ ಆಸ್ಪತ್ರೆಯಲ್ಲಿ ಬೀಡುಬಿಟ್ಟಿದ್ದ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯ ಫಾರ್ಮಾಸಿಸ್ಟ್ ಹಾಗೂ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ವಿರುದ್ಧ ಈಗ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆ.
ಮೂಲತಃ ಶಿರ್ಲಾಲು ಗ್ರಾಮದ ಕೆದ್ದು ನಿವಾಸಿಯಾಗಿರುವ ಈತ, ಆಸ್ಪತ್ರೆಯ ಔಷಧಾಲಯದ ಉಗ್ರಾಣದಲ್ಲೇ (Pharmacy Storeroom) ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ವಿಷಯವನ್ನು ಯಾರ ಮುಂದಾದರೂ ಬಾಯಿಬಿಟ್ಟರೆ ಕೆಲಸದಿಂದ ತೆಗೆದುಹಾಕುವುದಾಗಿ ಮಹಿಳೆಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜೂ.11 ರಂದು BNS-2023 (u/s-75(3), 79,351(2)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂ. 12 ರಂದು ಸಂತ್ರಸ್ತ ಮಹಿಳೆಯನ್ನು ಕರೆದುಕೊಂಡು ಬಂದು ಮಹಜರು ನಡೆಸಲಾಗಿದೆ. ಇನ್ನೊಂದಡೆ ಆಸ್ಪತ್ರೆಗೆ ಕರ್ತವ್ಯಕ್ಕೆ ಚಂದ್ರಶೇಖರ್ ಹಾಜರಾಗದೆ ಬಂಧನದ ಭೀತಿಯಿಂದ ಮಂಗಳೂರಿಗೆ ಪರಾರಿಯಾಗಿ ಅಡಗಿ ಕುಳಿತಿದ್ದಾನೆ ಎನ್ನಲಾಗಿದೆ.
ಚಂದ್ರಶೇಖರ್ ಆಸ್ಪತ್ರೆಗೆ ಜೂ.12 ರಂದು ಕರ್ತವ್ಯಕ್ಕೆ ಹಾಜರಾಗದ ಬಗ್ಗೆ ನೋಟಿಸ್ ಜಾರಿ ಮಾಡಲಾಗಿದ್ದು, ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಇಲಾಖಾ ತನಿಖೆ ಕೂಡ ನಡೆಯುತ್ತಿದ್ದು ವರದಿ ಬಂದ ಬಳಿಕ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ(DHO) ತಿಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ.






