ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆ ಆರ್ಭಟಿಸುತ್ತಿದೆ. ಭಾರಿ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು.

ಆದರೆ, ಜಿಲ್ಲಾಡಳಿತದ ಈ ಆದೇಶವನ್ನು ಗಾಳಿಗೆ ತೂರಿ, ಕೆಲವು ಶಾಲಾ-ಕಾಲೇಜುಗಳು ರಜೆ ದಿನವೂ ತರಗತಿಗಳನ್ನು ನಡೆಸಿ ಉದ್ಧಟತನ ಪ್ರದರ್ಶಿಸಿವೆ! ಈಗ ಇಂತಹ ಹತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಡಳಿತದ ಬಿಸಿ ತಟ್ಟಿದೆ.
ಜಿಲ್ಲಾಡಳಿತದ ನಿಯಮ ಉಲ್ಲಂಘಿಸಿ ಕ್ಲಾಸ್ ನಡೆಸಿದ ಹತ್ತಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಖುದ್ದಾಗಿ ಎಚ್ಚರಿಕೆ ನೀಡಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು, “ಯಾವ ಕಾರಣಕ್ಕಾಗಿ ರಜೆ ನೀಡಿಲ್ಲ ಎನ್ನುವುದಕ್ಕೆ ಸ್ಪಷ್ಟನೆ ನೀಡಬೇಕು. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸಿದರೆ ಅಂತಹ ಶಾಲೆಗಳ ಪರವಾನಗಿ (ಲೈಸೆನ್ಸ್) ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಕೊಟ್ಟ ಬಹುತೇಕ ದೂರುಗಳು ವಿದ್ಯಾರ್ಥಿಗಳ ಕಡೆಯಿಂದಲೇ ಬಂದಿವೆ ಎನ್ನುವುದು ವಿಶೇಷ.
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪ್ರವೇಶ ಪಡೆದು ಒಂದು ತಿಂಗಳ ಬಳಿಕ ಜೋರಾದ ಮಳೆ ಕಾಣಿಸಿಕೊಂಡಿದೆ. ಈ ಬಾರಿ ರೆಡ್ ಅಲರ್ಟ್ ಘೋಷಣೆ ಮಾಡಿರುವುದು ಕೂಡ ಬಹಳ ಕಡಿಮೆ. ಆದರೆ ಕಳೆದ ಒಂದು ವಾರದೊಳಗೆ ರೆಡ್ ಅಲರ್ಟ್ ಹಿನ್ನೆಲೆ ಜಿಲ್ಲಾಡಳಿತ ಅದರಲ್ಲೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಶಾಲೆಗಳಿಗೆ ಮೂರು ರಜೆಗಳನ್ನು ಘೋಷಣೆ ಮಾಡಿತ್ತು. ಆದರೆ ಈ ರಜೆಯಲ್ಲಿ ಕೂಡ ತರಗತಿ ನಡೆಸಲಾಗಿದೆ ಎಂದು ದೂರು ಬಂದಿದ್ದು, ಜಿಲ್ಲೆಯ ಹತ್ತಕ್ಕೂ ಅಧಿಕ ಶಾಲಾ- ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪ್ರಾಧಿಕಾರದ ಮೂಲಗಳು ಮಾಹಿತಿ ನೀಡಿದೆ.
ಕಠಿಣ ಕ್ರಮಕ್ಕೆ ನಿರ್ಧಾರ:
ಈ ಬಾರಿ ಮಳೆ ಕಾರಣದಿಂದ ಮೂರು ರಜೆಗಳನ್ನು ನೀಡಲಾಗಿತ್ತು. ಆದರೆ ಮೊದಲ ರಜೆ ಘೋಷಣೆ ಮಾಡಿದಾಗ ಬಹಳಷ್ಟು ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿ ಬಳಿಕ ತರಗತಿಗಳನ್ನು ನಡೆಸಿದ್ದರು. ಜಿಲ್ಲಾಡಳಿತ ಈ ಶಾಲೆ ಕಾಲೇಜುಗಳಿಗೆ ಎಚ್ಚರಿಕೆ ನೀಡಿ ರಜೆ ಘೋಷಣೆ ಮಾಡುವಂತೆ ಸೂಚನೆ ನೀಡಲಾಯಿತು. ಎರಡನೇ ಬಾರಿ ರಜೆ ಘೋಷಣೆ ಮಾಡಿದಾಗ ಕೂಡ ಇದೇ ರೀತಿ ನಡೆದಾಗಲೂ ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸುವ ಕೆಲಸ ಮಾಡಲಾಯಿತು. ಆದರೆ ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘಿಸಿ ತರಗತಿ ನಡೆಸಿದ ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ನೋಟಿಸ್ನಲ್ಲಿ ಯಾವ ಕಾರಣಕ್ಕೆ ರಜೆ ನೀಡಿಲ್ಲ ಎನ್ನುವ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕಿದೆ. ಆ ಬಳಿಕ ಇಂತಹ ಶಾಲೆ-ಕಾಲೇಜುಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿದೆ.
ವಿದ್ಯಾರ್ಥಿಗಳಿಂದ ದೂರು ಸಲ್ಲಿಕೆ:
ಜಿಲ್ಲಾಡಳಿತ ರಜೆ ಘೋಷಣೆ ಮಾಡಿದರೂ ಶಾಲೆ ಕಾಲೇಜುಗಳನ್ನು ನಡೆಸಿದವರ ವಿರುದ್ಧ ದೂರು ನೀಡಿದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ವಿಶೇಷ. ದ.ಕ. ಜಿಲ್ಲಾಡಳಿತಕ್ಕೆ ಈ ವಿದ್ಯಾರ್ಥಿಗಳು ದೂರವಾಣಿ ಮತ್ತು ಇತರ ಮೂಲಗಳ ಮೂಲಕ ನೀಡಿದ ದೂರುಗಳನ್ನೇ ಆಧರಿಸಿ ನೋಟಿಸ್ ಜಾರಿಗೊಳಿಸುವ ಕೆಲಸವಾಗಿದೆ.
ತಾಲೂಕು ಮಟ್ಟದಲ್ಲಿ ರಜೆ:
ಮಳೆಗಾಲದ ಸಮಯದಲ್ಲಿ ಜುಲೈ ಬಳಿಕವಷ್ಟೇ ತಾಲೂಕು ಮಟ್ಟದಲ್ಲಿ ರಜೆ ನೀಡಲಾಗುತ್ತದೆ. ಆದರೆ ಈ ಬಾರಿ ತಾಲೂಕು ಮಟ್ಟದ ರಜೆಗಳನ್ನು ಕೂಡ ಜಿಲ್ಲಾಧಿಕಾರಿಗಳೇ ನೀಡಲಿದ್ದಾರೆ. ತಹಸೀಲ್ದಾರ್, ಬಿಇಒ ಸೇರಿದಂತೆ ತಾಲೂಕು ಉನ್ನತ ಅಧಿಕಾರಿಗಳ ಮಾಹಿತಿ, ಮಳೆಯ ವಿವರ ಪಡೆದು ರಜೆ ಕೊಡುವ ಕಾರ್ಯವನ್ನು ಜಿಲ್ಲಾಧಿಕಾರಿ ಮಾಡಲಿದ್ದಾರೆ. ಈ ಹಿಂದೆ ತಾಲೂಕು ಮಟ್ಟದ ರಜೆಗಳನ್ನು ರಜೆಯ ಮುಂಜಾನೆ ನಿರ್ಧಾರ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಸಿದ್ಧತೆ ಮಾಡಿಕೊಂಡು ಬಿಡುತ್ತಿದ್ದರು. ಈ ಬಾರಿ ಅದಕ್ಕಿಂತ ಮೊದಲೇ ನಿರ್ಧಾರ ಮಾಡುವ ಕುರಿತು ಚಿಂತನೆ ನಡೆದಿದೆ.
“ರಜೆ ಘೋಷಣೆ ಮಾಡಿದ ಬಳಿಕವೂ ಕೆಲವು ಶಾಲೆ- ಕಾಲೇಜುಗಳು ತರಗತಿಯನ್ನು ನಡೆಸಿದೆ. ಆರಂಭದಲ್ಲಿಎಚ್ಚರಿಕೆ ನೀಡಿ ಬಿಟ್ಟಿದ್ದೆವು ಆದರೆ ಮತ್ತೆ ಉಲ್ಲಂಘನೆಯಾದಾಗ ನೋಟಿಸ್ ನೀಡುವ ಕೆಲಸ ಮಾಡಿದ್ದೇವೆ. ಮುಂದೆ ಉಲ್ಲಂಘನೆ ನಡೆದರೆ ಅವರ ಶಾಲಾ ಪರವಾನಗಿಯನ್ನು ರದ್ದು ಮಾಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯುವ ಚಿಂತನೆ ನಡೆಸಿದ್ದೇವೆ. ಅದರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಯಮ, ಕಾನೂನುಗಳು ಬಹಳಷ್ಟು ಕಠಿಣವಾಗಿರುತ್ತದೆ. ಕ್ರಮಗಳನ್ನು ತೀವ್ರ ರೀತಿಯಲ್ಲಿ ಕೈಗೊಳ್ಳಬೇಕಾದ ಅಗತ್ಯತೆ ಇರುತ್ತದೆ.”
-ದರ್ಶನ್ ಎಚ್.ವಿ., ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ




