ಮಂಗಳೂರು: ಕರಾವಳಿಯ ಜನಪ್ರಿಯ ಕ್ರೀಡೆಯಾದ ಅಂಡರ್ ಆರ್ಮ್ ಕ್ರಿಕೆಟ್ನ ಅಂಬಾಸಿಡರ್ ಎಂದೇ ಖ್ಯಾತಿ ಗಳಿಸಿದ್ದ, “ಮಿತ್ರ ಯಂಗ್ ಫ್ರೆಂಡ್ಸ್ ಉರ್ವ” ತಂಡದ ಮಾಲೀಕ ತಿಲಕ್ ಗುರು ಅವರು ವಿಧಿವಶರಾಗಿದ್ದಾರೆ. ಅವರ ನಿಧನದಿಂದಾಗಿ ಮಂಗಳೂರಿನ ಕ್ರೀಡಾ ಮತ್ತು ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಶೂನ್ಯ ಸೃಷ್ಟಿಯಾಗಿದೆ.

ತಿಲಕ್ ಗುರು ಅವರು ಕೇವಲ ಒಂದು ತಂಡದ ಮಾಲೀಕರಾಗಿರಲಿಲ್ಲ, ಬದಲಿಗೆ ಅಂಡರ್ ಆರ್ಮ್ ಕ್ರಿಕೆಟ್ಗೆ ಹೊಸ ಆಯಾಮ ತಂದುಕೊಟ್ಟ ಮಹಾ ರೂವಾರಿಯಾಗಿದ್ದರು.
ಮಂಗಳೂರಿನ ಐತಿಹಾಸಿಕ ಉರ್ವ ಮೈದಾನದಲ್ಲಿ ನಿರಂತರವಾಗಿ ನಡೆಯುವ ಕ್ರಿಕೆಟ್ ಪಂದ್ಯಾಟಗಳ ಮೇಲ್ವಿಚಾರಕರಾಗಿ, ಪೋಷಕರಾಗಿ ಹಾಗೂ ಸ್ವತಃ ತಂಡದ ನಾಯಕರಾಗಿ ಅವರು ಕಾರ್ಯಾಚರಿಸುತ್ತಿದ್ದರು. ಗಲ್ಲಿ ಕ್ರಿಕೆಟ್ನಂತಿದ್ದ ಅಂಡರ್ ಆರ್ಮ್ ಆಟಕ್ಕೆ “ನೇರ ಪ್ರಸಾರ” ದ ಆಲೋಚನೆಯನ್ನು ಕೊಟ್ಟು, ಅದನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ತಿಲಕ್ ಗುರು ಅವರಿಗೆ ಸಲ್ಲುತ್ತದೆ.
ಅಂಡರ್ ಆರ್ಮ್ ಕ್ರಿಕೆಟ್ ಆಟಗಾರರ ಬದುಕಿಗೆ ಆರ್ಥಿಕ ಭದ್ರತೆ ನೀಡಲು ಶ್ರಮಿಸಿದವರು ತಿಲಕ್ ಗುರು. ಸ್ಥಳೀಯ ಆಟಗಾರರಿಗೆ ದಿನ ಭತ್ಯೆಯ ಆಧಾರದ ಮೇಲೆ ಸಂಭಾವನೆ ನೀಡುವ ವಿಶಿಷ್ಟ ವ್ಯವಸ್ಥೆಗೆ ಇವರೇ ನೇತೃತ್ವ ವಹಿಸಿದ್ದರು. ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಮಂಗಳೂರಿನ ಹಲವು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾಗಿ ಹಾಗೂ ಯಶಸ್ವಿ ಆಯೋಜಕರಾಗಿಯೂ ಅವರು ಗುರುತಿಸಿಕೊಂಡಿದ್ದರು.






