ಕತಾರ್: ಸ್ಯಾಂಡಲ್ವುಡ್ನ ‘ಹ್ಯಾಟ್ರಿಕ್ ಹೀರೋ’, ಕೋಟ್ಯಂತರ ಕನ್ನಡಿಗರ ನೆಚ್ಚಿನ ಅಭಿನೇತ್ರಿ ಡಾ. ಶಿವರಾಜ್ ಕುಮಾರ್ ಅವರ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳು ಮತ್ತು ಕನ್ನಡಿಗರು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. ಈ ಸಂಭ್ರಮದ ವೇಳೆಯಲ್ಲೇ, ಗಲ್ಫ್ ರಾಷ್ಟ್ರ ಕತಾರ್ನಿಂದ ಶಿವಣ್ಣನಿಗೆ ವಿಶೇಷ ಪ್ರೀತಿಯ ಶುಭ ಹಾರೈಕೆಯೊಂದು ಹರಿದುಬಂದಿದೆ!.

ಕರ್ನಾಟಕ ಸಂಘ ಕತಾರ್ನ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಶಿವಣ್ಣ ಅವರ ಜೊತೆಗಿನ ಕಳೆದ ಒಂದು ದಶಕದ ಮಧುರ ನೆನಪುಗಳನ್ನು ಮೆಲಕು ಹಾಕುತ್ತಾ ಭಾವಪೂರ್ಣ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಅದು ಸುಮಾರು ಒಂದು ದಶಕದ ಹಿಂದಿನ ಮಾತು… ಕತಾರ್ನ ಕನ್ನಡಿಗರ ಪಾಲಿಗೆ ಅದೊಂದು ಅವಿಸ್ಮರಣೀಯ ಕ್ಷಣ. ಕರ್ನಾಟಕ ಸಂಘ ಕತಾರ್ ಆಯೋಜಿಸಿದ್ದ ವಾರ್ಷಿಕ ವಿಶೇಷ “ಕರ್ನಾಟಕ ರಾಜ್ಯೋತ್ಸವ” ಕಾರ್ಯಕ್ರಮಕ್ಕೆ ಶಿವಣ್ಣ ಮೊಟ್ಟಮೊದಲ ಬಾರಿಗೆ ಕಾಲಿಟ್ಟಿದ್ದರು. ತಮ್ಮ ನೆಚ್ಚಿನ ನಟನನ್ನು ಕಣ್ಣುಂಬಿಕೊಂಡ ಕತಾರ್ ಕನ್ನಡಿಗರ ಹರ್ಷಕ್ಕೆ ಮೇರೆಯೇ ಇರಲಿಲ್ಲ. ಅದಾದ ನಂತರ, ತಮ್ಮ ‘ಲೀಡರ್’ ಚಿತ್ರದ ಶೂಟಿಂಗ್ಗಾಗಿ ದೋಹಾಗೆ ಆಗಮಿಸಿದ್ದ ಶಿವಣ್ಣ, ಮತ್ತೊಮ್ಮೆ ದೋಹಾದ ಮಣ್ಣಿನಲ್ಲಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿದ್ದರು.


ಶಿವಣ್ಣ ಎಂದರೆ ಕೇವಲ ನಟನೆಯಷ್ಟೇ ಅಲ್ಲ, ಅವರ ಸರಳತೆ ಮತ್ತು ಪ್ರೀತಿಗೆ ಎಲ್ಲರೂ ಶರಣಾಗುತ್ತಾರೆ. ಕತಾರ್ನಲ್ಲಿದ್ದಾಗ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಜನ್ಮದಿನದಂದು, ಸ್ವತಃ ಶಿವಣ್ಣನವರೇ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸರ್ಪ್ರೈಸ್ ಭೇಟಿ ಸುಬ್ರಹ್ಮಣ್ಯ ಅವರಿಗೆ ಸಿಕ್ಕ ಅತಿ ದೊಡ್ಡ ಉಡುಗೊರೆಯಾಗಿತ್ತು. ತಮ್ಮ ಅಪಾರ ಪ್ರೀತಿ, ವಿಶ್ವಾಸ ಹಾಗೂ ಸರಳತೆಯ ಮೂಲಕ ಶಿವಣ್ಣ ಅಲ್ಲಿ ಎಲ್ಲರ ಮನಗೆದ್ದಿದ್ದರು.
ಕಳೆದ ಕೆಲವು ವರ್ಷಗಳಲ್ಲಿ ಶಿವಣ್ಣನವರ ಜೀವನದಲ್ಲಿ ಕಾರ್ಮೋಡಗಳು ಕವಿದಿದ್ದವು. ಮಾತೃ ವಿಯೋಗ, ಪ್ರೀತಿಯ ತಮ್ಮ ‘ಅಪ್ಪು’ ಪುನೀತ್ ರಾಜಕುಮಾರ್ ಅವರ ಅಕಾಲಿಕ ಅಗಲಿಕೆ ಹಾಗೂ ತಮ್ಮ ಸ್ವಂತ ಆರೋಗ್ಯದಲ್ಲಾದ ಏರುಪೇರುಗಳಿಂದಾಗಿ ಜನ್ಮದಿನಾಚರಣೆಯನ್ನು ಸಂಭ್ರಮಿಸಲು ಸಾಧ್ಯವಾಗಿರಲಿಲ್ಲ.

ಆದರೆ, ಈಗ ಆ ಎಲ್ಲಾ ಕಷ್ಟಗಳ ಕಾರ್ಮೋಡ ಕಳೆದು, ಶಿವಣ್ಣ ಮತ್ತೆ ಪೂರ್ಣ ಆರೋಗ್ಯದೊಂದಿಗೆ, ಎಂದಿನಂತೆ ಕನ್ನಡಿಗರನ್ನು ತಮ್ಮ ನಟನೆಯ ಮೂಲಕ ರಂಜಿಸಲು ಸಜ್ಜಾಗಿದ್ದಾರೆ. ಈ ಬಾರಿ ಸಂಭ್ರಮದಿಂದ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಪರಮಾನಂದ ತಂದಿದೆ.
ಕರ್ನಾಟಕ ಸಂಘ ಕತಾರ್ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, “ಅಖಿಲ ವಿಶ್ವದ ಕನ್ನಡಿಗರ ಹಾರೈಕೆ, ಭಗವಂತನ ಹಾಗೂ ಗುರು-ಹಿರಿಯರ ಆಶೀರ್ವಾದ ಸದಾ ಶಿವಣ್ಣ ಮತ್ತು ಅವರ ಕುಟುಂಬದ ಮೇಲೆ ಹೂಮಳೆಯಂತೆ ಇರಲಿ. ಅವರ ಮನೆ-ಮನಗಳಲ್ಲಿ ಎಂದಿಗೂ ಹರ್ಷ ನೆಲೆಸಲಿ” ಎಂದು ಮನಃಪೂರ್ವಕವಾಗಿ ಹಾರೈಸಿದ್ದಾರೆ.







