ಉಜಿರೆ: ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ವೈದ್ಯರಿಗೆ ಸ್ನೇಹಕೂಟ ಏರ್ಪಡಿಸಲಾಗಿತ್ತು. ಉಜಿರೆಯ ಓಶನ್ ಪರ್ಲ್ನಲ್ಲಿ ಆಯೋಜಿಸಲಾಗಿದ್ದ ಸ್ನೇಹಕೂಟದಲ್ಲಿ ೩೦೦ಕ್ಕೂ ಹೆಚ್ಚು ಮಂದಿ ವೈದ್ಯರು ಭಾಗವಹಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ವೀಡಿಯೋ ಸಂದೇಶದ ಮೂಲಕ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಾಲೂಕಿನ ವೈದ್ಯರಿಗೆ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸಿದರು. ಅವರು ಮಾತನಾಡುತ್ತಾ, ಏನೇ ಆರೋಗ್ಯದ ಸಮಸ್ಯೆ ಇದ್ದರು ಮೊದಲು ಭೇಟಿ ಮಾಡುತ್ತಿದ್ದು ಫ್ಯಾಮಿಲಿ ವೈದ್ಯರನ್ನು. ಅವರ ಸಲಹೆ ಸೂಚನೆಗಳಂತೆ ವೈದ್ಯಕೀಯ ಚಿಕಿತ್ಸೆ ನಡೆಯುತ್ತಿತ್ತು. ಫ್ಯಾಮಿಲಿ ವೈದ್ಯರಿಗೆ ಆ ಕುಟುಂಬದ ಬಗ್ಗೆ ಕಾಳಜಿ ಇತ್ತು, ಜವಾಬ್ದಾರಿ ಇತ್ತು. ಆ ಕುಟುಂಬದ ಸದಸ್ಯರಿಗೂ ವೈದ್ಯರ ಮೇಲೆ ನಂಬಿಕೆ ಇತ್ತು ಎಂದು ಫ್ಯಾಮಿಲಿ ವೈದ್ಯರ ಸೇವೆಯನ್ನು ನೆನಪಿಸಿಕೊಂಡರು.
ಅಳದಂಗಡಿ ಅರಮನೆಯ ಅರಸರು, ಹಿರಿಯ ವೈದ್ಯರೂ ಆಗಿರುವ ಡಾ| ಪದ್ಮಪ್ರಸಾದ್ ಅಜಿಲ ಮಾತನಾಡಿ, ಸ್ನೇಹಕೂಟದ ಮೂಲಕ ತಾಲೂಕಿನ ವೈದ್ಯರನ್ನು ಒಟ್ಟುಗೂಡಿಸಿ, ಪರಿಚಯ, ವಿಚಾರ ವಿನಿಮಯಕ್ಕೆ ಅವಕಾಶ
ಮಾಡಿಕೊಟ್ಟ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ಕಾರ್ಯ ಶ್ಲಾಘನೀಯ. ವೈದ್ಯಕೀಯ ಸೇವೆ ಮಾಡುವವರಿಗೆ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಜನರ ಸೇವೆ ಮಾಡಲು ಪ್ರೋತ್ಸಾಹ ನೀಡುತ್ತದೆ ಎಂದರು.
ಬೆನಕ ಆಸ್ಪತ್ರೆಯ ಅಧ್ಯಕ್ಷರು ಮತ್ತು ಮೆಡಿಕಲ್ ಡೈರೆಕ್ಟರ್ ಡಾ| ಗೋಪಾಲಕೃಷ್ಣ ಕೆ ಮಾತನಾಡಿ, ವೈದ್ಯಕೀಯ ವೃತ್ತಿ ಶ್ರೇಷ್ಟವಾದದ್ದು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ವೈದ್ಯರ ಸೇವೆಯನ್ನು ನಮಗೆಲ್ಲ ಮತ್ತೊಮ್ಮೆ ನೆನಪಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಹಮ್ಮಿಕೊಂಡಿರುವ ಈ ಸ್ನೇಹಕೂಟದ ಮೂಲಕ ಬೆಳ್ತಂಗಡಿ ತಾಲೂಕಿನ ವೈದ್ಯರೆಲ್ಲರನ್ನು ಗುರುತಿಸುವ ಕಾರ್ಯವಾಗಿದೆ. ಇಲ್ಲಿ ವೈದ್ಯವೃತ್ತಿ
ನಡೆಸುವ ನಮಗೆಲ್ಲಾ ಪರಸ್ಪರ ಭೇಟಿಯಾಗುವ ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು ಎಂದರು.
ವೈದ್ಯಕೀಯ ಸೇವೆಯಲ್ಲಿ ನಿತ್ಯ ಒಂದೇ ರೀತಿಯ ಬಿಡುವಿಲ್ಲದ ಕೆಲಸಗಳಿಂದ ಬೇಸತ್ತ ಮನಸ್ಸುಗಳಿಗೆ ಮನರಂಜನೆ ನೀಡಲು ಈ ಸ್ನೇಹಕೂಟ ಹಮ್ಮಿಕೊಳ್ಳಲಾಗಿತ್ತು. ಮನರಂಜನೆ ಮತ್ತು ವಿಚಾರ ವಿನಿಮಯಕ್ಕೆ ಉತ್ತಮ ವೇದಿಕೆಯಾಗಿದ್ದ ಈ ಸ್ನೇಹಕೂಟದಲ್ಲಿ ಒತ್ತಡ ಮರೆತು ವೈದ್ಯರು ಸೇರಿದಂತೆ ಅವರ ಕುಟುಂಬದವರು ಸಂತೋಷದಿಂದ ಭಾಗವಹಿಸಿದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೆಶಕರಾದ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಅತಿಥಿಗಳನ್ನು
ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ನಿಖಿಲ್ ಶೆಟ್ಟಿ ಮತ್ತು ವಿನ್ಯಾಸ್ ಭಂಡಾರಿ ನಿರೂಪಿಸಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮ ಭೋಜನದೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.




