ಬಂಟ್ವಾಳ, ಜು. 17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಎಂಬವರನ್ನು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಬಂಟ್ವಾಳ ಪೊಲೀಸರು ಬಲೆಗೆ ಕೆಡವಿದ್ದಾರೆ.

ಬಿಸಿರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಅವರ ಮೇಲೆ ಮಚ್ಚಿನಿಂದ ದಾಳಿ ನಡೆಸಿ, ಧಾಷ್ಟ್ಯ ಮೆರೆದು ಪರಾರಿಯಾಗಿದ್ದ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಓಡಿಲ್ನಾಲ ನಿವಾಸಿ ಚೇತನ್ ಎಂದು ಗುರುತಿಸಲಾಗಿದೆ.

ಘಟನೆ ನಡೆದ ತಕ್ಷಣದಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಬಂಟ್ವಾಳ ಪೊಲೀಸರು ವಿಶೇಷ ತಂಡ ರಚಿಸಿ ಜಾಲ ಬೀಸಿದ್ದರು. ತೀವ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊನೆಗೂ ಆರೋಪಿ ಚೇತನ್ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ, ಬಂಧನದ ವೇಳೆ ಆರೋಪಿ ಚೇತನ್ ಇಲಿ ಪಾಷಾಣ (ವಿಷ) ಸೇವಿಸಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೊಲೀಸರ ಕೈಗೆ ಸಿಕ್ಕಿಬೀಳುವ ಭೀತಿಯಿಂದ ಆತ ವಿಷ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ತಕ್ಷಣವೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ವೈದ್ಯಕೀಯ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆತನಿಗೆ ಚಿಕಿತ್ಸೆ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.







