ಬೆಂಗಳೂರು: ಎತ್ತಕಡೆ ಸಾಗುತ್ತಿದೆ ನಮ್ಮ ಸಮಾಜ? ಇಲ್ಲೊಬ್ಬ ಪತಿ ಮಾಡಿರೋ ಕೃತ್ಯ ಕೇಳಿದ್ರೆ ನಿಮ್ಮ ಮೈ ಜುಂ ಅನ್ನೋದು ಗ್ಯಾರಂಟಿ. ಹೆತ್ತ ಮಗುವಿನ ಮುಖ ನೋಡಬೇಕಾಗಿದ್ದ ಗರ್ಭಿಣಿ ಪತ್ನಿಯನ್ನೇ ಪತಿ ಕ್ರೂರವಾಗಿ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಘೋರ ದುರಂತ ನಡೆದಿರುವುದು ಸಿಲಿಕಾನ್ ಸಿಟಿಯ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಮೂಲತಃ ಉತ್ತರ ಪ್ರದೇಶದವರಾದ ಮನೋಜ್ ಎಂಬಾತನೇ ತನ್ನ 4 ತಿಂಗಳ ಗರ್ಭಿಣಿ ಪತ್ನಿ ಸ್ವಪ್ನಳನ್ನು ಅಮಾನುಷವಾಗಿ ಕೊಲೆ ಮಾಡಿದ ಪಾಪಿ.

ಬೆಂಗಳೂರಿನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಮನೋಜ್, ಬುಧವಾರ ತನ್ನದೇ ಮನೆಯಲ್ಲಿ ಪತ್ನಿಯ ಕುತ್ತಿಗೆಗೆ ನಾಯಿ ಕಟ್ಟಿಹಾಕುವ ಬೆಲ್ಟ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಹೊಟ್ಟೆಯಲ್ಲಿ ಬೆಳಿತಾ ಇದ್ದ ಮಗುವಿನ ಮೇಲೂ ಕರುಣೆ ತೋರದೆ ಈ ಕೃತ್ಯ ಎಸಗಿದ್ದಾನೆ.

ಪತ್ನಿ ಸ್ವಪ್ನ ಪ್ರಾಣ ಬಿಡುತ್ತಿದ್ದಂತೆ ಗಾಬರಿಗೊಂಡ ಮನೋಜ್, ತಾನೂ ಕೂಡ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮರುದಿನ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಘಟನಾ ಸ್ಥಳಕ್ಕೆ ಧಾವಿಸಿದ ಸಿಕೆ ಅಚ್ಚುಕಟ್ಟು ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಕೊಲೆ ಹಾಗೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಒಟ್ಟಿನಲ್ಲಿ, ಕ್ಷಣಿಕ ಕೋಪಕ್ಕೆ ಇಬ್ಬರು ಜೀವಗಳು ಬಲಿಯಾಗಿದ್ದು, ಹುಟ್ಟುವ ಮುನ್ನವೇ ಒಂದು ಕಂದಮ್ಮ ಲೋಕ ನೋಡುವ ಭಾಗ್ಯ ಕಳೆದುಕೊಂಡಿದೆ. ಇಂತಹ ಕ್ರೂರ ಘಟನೆಗಳು ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಮೂಡಿಸಿದೆ.






